ಹುಬ್ಬಳ್ಳಿ : ನಾವು ಸಾವರ್ಕರ್, ಶಿವಾಜಿ ಹಾಗೂ ರಾಣಾ ಪ್ರತಾಪರ ವಂಶಸ್ಥರು ಎಂಬ ಚಕ್ರವರ್ತಿ ಸೂಲಿಬೆಲೆ ಅವರ ಹೇಳಿಕೆಗೆ ಸಚಿವ ಎಂ.ಬಿ ಪಾಟೀಲ್ ತಿರುಗೇಟು ನೀಡಿದರು.
ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾವು ಬಸವಣ್ಣನವರ ವಂಶಸ್ಥರು ಎಂದು ಹೇಳಿದರು.
ನಮ್ಮ ಸರ್ಕಾರ ಕೊಟ್ಟ ಮಾತನ್ನ ತಪ್ಪಲ್ಲ. ಕೊಟ್ಟ ಮಾತನ್ನ ಉಳಿಸಿಕೊಳ್ಳುತ್ತೇವೆ. ಎಲ್ಲ ಉಚಿತ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುತ್ತೇವೆ. ಕೇಂದ್ರ ಸರ್ಕಾರ ಎಷ್ಟೇ ತೊಂದರೆ ಕೊಟ್ಟರೂ ನಾವು ಅಕ್ಕಿ ಕೊಟ್ಟೇ ಕೊಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ : ಅಯ್ಯೋ ಪುಣಾತ್ಮ.. ನಾನು ಸಾವರ್ಕರ್ ವಂಶಸ್ಥ, ನನ್ನನ್ನ ಜೈಲಿಗೆ ಹಾಕ್ತೀರಾ? : ಚಕ್ರವರ್ತಿ ಸೂಲಿಬೆಲೆ
ಬಿಜೆಪಿ ಸೇರಿದವರು ಉತ್ತರ ಕೊಡಲಿ
ಕಾಂಗ್ರೆಸ್ ಬಂದಮೇಲೆ ಬಿಜೆಪಿ ಶಿಸ್ತು ಇಲ್ಲ ಎಂದಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, 17 ಜನ ಬಿಜೆಪಿ ಸೇರಿದವರು ಉತ್ತರ ಕೊಡಲಿ. ಮುನಿರತ್ನ, ಡಾ.ಕೆ ಸುಧಾಕರ್, ಎಂಟಿಬಿ ನಾಗರಾಜ್, ಎಸ್.ಟಿ ಸೋಮಶೇಖರ್, ಬಿ.ಸಿ ಪಾಟೀಲ್ ಉತ್ತರ ನೀಡಲಿ. ಅವರನ್ನ ಮರಳಿ ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಮಾತೇ ಇಲ್ಲ ಎಂದು ಕುಟುಕಿದರು.
ಕಾಂಗ್ರೆಸ್ ವಿದ್ಯುತ್ ದರ ಹೆಚ್ಚಿಸಿಲ್ಲ
ವಿದ್ಯುತ್ ದರ ಏರಿಕೆ ಮಾಡಿದ್ದು ನಮ್ಮ ಸರ್ಕಾರ ಅಲ್ಲ. ಕೆಇಆರ್‌ಸಿ ವಿದ್ಯುತ್ ದರ ಏರಿಕೆ ಮಾಡಿದೆ. ಕೆಇಆರ್‌ಸಿ ತೆಗೆದುಕೊಂಡ ನಿರ್ಧಾರದಲ್ಲಿ ಕೆಲವು ಲೋಪಗಳಿರುವುದು ಗಮನಕ್ಕೆ ಬಂದಿದೆ. ಸರ್ಕಾರ ಮಟ್ಟದಲ್ಲಿ ಚರ್ಚಿಸಿ ಸರಿಪಡಿಸಲಾಗುವುದು ಎಂದು ಎಂ.ಬಿ ಪಾಟೀಲ್ ಹೇಳಿದರು.