Monday, December 23, 2024

ಪ್ರಿಯಾಂಕಾ, ರಾಹುಲ್ ಉತ್ತರ ಪ್ರದೇಶದಲ್ಲಿ ಜೀರೋ : ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ : ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಹಿಡಿದುಕೊಂಡು ನೀವು ಉತ್ತರ ಪ್ರದೇಶದಲ್ಲಿ ಜೀರೋ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಗೆ ಐರನ್ ಲೆಗ್ ಎಂದ ತಂಗಡಗಿಗೆ ತಿರುಗೇಟು ನೀಡಿದರು.

ಸಿದ್ದರಾಮಯ್ಯನವರು 2014ರ ಲೋಕಸಭಾ ಚುನಾವಣೆ, 2018ರ ವಿಧಾನಸಭಾ ಚುನಾವಣೆ, 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರ ವಿರುದ್ಧ ಅಪ್ರಬುದ್ದ ಭಾಷೆ ಬಳಸಿದ್ದರು. ‘ನರ ರಾಕ್ಷಸ’ ಎಂದಿದ್ದರು. ಜನ ಅದಕ್ಕೆ ಉತ್ತರ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಹಾಗೂ ಶಿವರಾಜ್ ತಂಗಡಗಿ ಅವರೇ, ಮೋದಿ ಅವರ ವಿರುದ್ಧ ಮಾತನಾಡುವುದಕ್ಕೂ ಮುನ್ನ ನಿಮ್ಮ ಸ್ಥಿತಿ ಏನಿದೆ ನೋಡಿಕೊಳ್ಳಿ ಎಂದು ಕುಟುಕಿದರು.

ಇದನ್ನೂ ಓದಿ : ಪ್ರಧಾನಿ ಮೋದಿಯವರದ್ದು ಐರನ್ ಲೆಗ್ : ಸಚಿವ ಶಿವರಾಜ್ ತಂಗಡಗಿ

ರಾಹುಲ್ ನೇತೃತ್ವದಲ್ಲಿ ಸ್ಥಿತಿಗೆ ಬಂದಿದ್ದೀರಿ

9 ವರ್ಷದ ನಂತರ ಅಧಿಕಾರಕ್ಕೆ ಬಂದಿದ್ದೀರಿ‌. ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಹಿಡಿದುಕೊಂಡು ನೀವು ಉತ್ತರ ಪ್ರದೇಶದಲ್ಲಿ ಜೀರೋ. ಇದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಲಿ. ಒಂದು‌ ಕಾಲದಲ್ಲಿ ಇಡೀ ದೇಶದಲ್ಲಿ ಕಾಂಗ್ರೆಸ್. ರಾಹುಲ್ ಗಾಂಧಿ ನೇತೃತ್ವದಲ್ಲಿ ಈ ಸ್ಥಿತಿಗೆ ಬಂದು ತಲುಪಿದ್ದೀರಿ. ಅಹಂಕಾರ ಒಳ್ಳೆದಲ್ಲ ಎಂದು ಪ್ರಲ್ಹಾದ್ ಜೋಶಿ ಛೇಡಿಸಿದರು.

ನೀವು ಅಧಿಕೃತ ವಿರೋಧ ಪಕ್ಷ ಅಲ್ಲ

ಜಗತ್ತು ಮೋದಿ ಅವರನ್ನು ಸ್ವೀಕಾರ ಮಾಡಿದೆ. ಅಪ್ರಬುದ್ದ ಭಾಷೆ ಬಳಸೋದಕ್ಕೆ ಜನ ಉತ್ತರ ಕೊಟ್ಟಿದ್ದಾರೆ. ಮೋದಿ ಕೈ ಬೀಸಿದ ಕಡೆ ನಾವು ಅಧಿಕಾರಕ್ಕೆ ಬಂದಿದ್ದೀವಿ. ಕರ್ನಾಟಕದಲ್ಲಿ ಮಾತ್ರ ನೀವು ಅಧಿಕಾರಕ್ಕೆ ಬಂದಿದ್ದೀರಿ. ಲೋಕಸಭೆಯಲ್ಲಿ ನೀವು ಅಧಿಕೃತ ವಿರೋಧ ಪಕ್ಷ ಅಲ್ಲ. ರಾಜಕಾರಣದಲ್ಲಿ ಟೀಕೆ ಟಿಪ್ಪಣಿ ಇರಬೇಕು. ಈ ತರಹ ಸಾರ್ವಜನಿಕ ಯೋಗ್ಯವಲ್ಲದ ಭಾಷೆ ಬಳಸಬಾರದು ಎಂದು ಚಾಟಿ ಬೀಸಿದರು.

RELATED ARTICLES

Related Articles

TRENDING ARTICLES