ಬಾಗಲಕೋಟೆ : ನಾವು ಸಹ ಕೃಷ್ಣಾ ನದಿ ನೀರು ಕುಡಿದೀವಿ. ಬಾಗಲಕೋಟೆ, ವಿಜಯಪುರ ಗಾಳಿನೇ ಸೇವಿಸಿದ್ದೇವೆ ಎನ್ನುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಮಾಜಿ ಸಚಿವ ಮುರುಗೇಶ್ ನಿರಾಣಿ ಟಾಂಗ್ ಕೊಟ್ಟರು.
ಬಾಗಲಕೋಟೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯಾರು ಏನು ಮಾತನಾಡ್ತಾರೆ ಅದರ ಹತ್ತರಷ್ಟು ಶಬ್ಧ ನಮ್ಮ ಬಾಯಲ್ಲಿ ಇವೆ. ಶಿಸ್ತಿನಿಂದ ಇದ್ದರೆ ನಾವು ಶಿಸ್ತಿನಿಂದ ಇರುತ್ತೇವೆ. ನೀವು ಏನಾದರೂ ಉಪದ್ಯಾಪಿ ಮಾಡಲು ಬಂದಿದ್ರೆ, ನಾವು ಬೇರೆ ಭಾಷೆಯಲ್ಲಿ ಮಾತನಾಡ್ತೇವೆ. ನಮ್ಮಲ್ಲಿ ನಿಷ್ಠೆ ಇರಲಿಲ್ಲ, ವೇದಿಕೆಯಲ್ಲಿ ಇರುವ ಅಥವಾ ಪ್ರಮುಖರ ತಪ್ಪಿನಿಂದ ಸೋತಿದ್ದೇವೆ ವಿನಃ, ಕಾರ್ಯಕರ್ತರಿಂದಲ್ಲ ಎಂದು ಕುಟುಕಿದರು.
ಬಿಜೆಪಿ ನನ್ನ ತಾಯಿ, ಇಲ್ಲೇ ಇತ್ರೀನಿ
ನಾನು 35 ವರ್ಷದಿಂದ ಬಿಜೆಪಿಯಲ್ಲಿ ಇದ್ದೇನೆ. ಬಿಜೆಪಿ ನನ್ನ ತಾಯಿ. ಇಲ್ಲೇ ಇದ್ದೇನೆ, ಇಲ್ಲೇ ಇರ್ತೇನೆ. ಈ ಮುರುಗೇಶ್ ನಿರಾಣಿ, ಮತ್ತೊಬ್ಬರ ತರಹ ನಾಟಕ ಆಡಿ ಈ ಕಡೆ, ಆ ಕಡೆ ಹೋಗಲ್ಲ. ತಲೆಮೇಲೆ ಟೊಪ್ಪಗೆ ಹಾಕಿಕೊಂಡು ನಮಾಜ್ ಬಿಟ್ಟು ಮಾತಾಡೋಲ್ಲ. ನಾಟಕ ಮಾಡ್ತೀರಿ? ಯಾರನ್ನೋ ಸೋಲಿಸಲು ಹೋಗಿ ಡುಮುಕ್ ಅಂದ್ರಂತೆ ಎಂದು ಛೇಡಿಸಿದರು.
ಇದನ್ನೂ ಓದಿ : 365 ದಿನವೂ ಬಿಜೆಪಿಯವರು ಪ್ರತಿಭಟನೆ ಮಾಡಲಿ : ಡಿ.ಕೆ ಶಿವಕುಮಾರ್ ತಿರುಗೇಟು
ಮಂತ್ರಿ ಚೇಲಾ ಆಗಿ ಕೆಲಸ ಮಾಡ್ತಾರೆ
ನೀವು ಡುಮುಕ್ ಆಗಿದ್ರಲ್ಲ. ಅಸೆಂಬ್ಲಿಯಲ್ಲೂ ಸೋತಿರಿ, ಪಾರ್ಲಿಮೆಂಟಲ್ಲೂ ಸೋತಿರಿ. ಅದನ್ನ ಮರೆತಿರಿ. ಅಟಲ್ ಬಿಹಾರಿ ವಾಜಪೇಯಿ, ದೇವೇಗೌಡ್ರು, ಯಡಿಯೂರಪ್ಪ, ಸಿದ್ದರಾಮಯ್ಯ ಸೋತಿದ್ದಾರೆ. ಯಾರೆಲ್ಲ ಒಳ ಒಪ್ಪಂದ ಮಾಡ್ಕೊಂಡ್ರಲ್ರೀ ನಮ್ಮ ಪಾರ್ಟಿಯಲ್ಲಿ. ವಿಜಯಪುರದಲ್ಲಿ ಒಬ್ಬ ಮಂತ್ರಿ ಇದ್ದಾರೆ. ಅವರ ಚೇಲಾ ಆಗಿ ಕೆಲಸ ಮಾಡ್ತಾರೆ. ಮತ್ತೊಬ್ಬರಿಗೆ ಬೆರಳು ಮಾಡಿ ತೋರಸ್ತಾರೆ ಎಂದು ಚಾಟಿ ಬೀಸಿದರು.
ಎಷ್ಟ ಮಂದಿ ಹೇಳಲಿ ನಾನು, ಮುಗಿತು ಅದು. ಯಾರನ್ನರ ಟಿಂಗಲ್ ಮಾಡಿದ್ರೆ, ನಾನು ದೊಡ್ಡಾವ ಆಗ್ತೇನೆ ಅಂದ್ಕೊಂಡಿದ್ದಾರೆ. ನಾ ಹೇಳ್ತೇನೆ, ಬಹಳ ಕೆಣಕಲು ಹೋದ್ರೆ ಎಲ್ಲಾರು ಸಗಣಿ ತಿನ್ನೋರು ಅದಾರ. ಅದೆಲ್ಲ ಮರೆತು ಬಿಡೋಣ, ಇವತ್ತಿನಿಂದ ಹೊಸ ಮನುಷ್ಯರಾಗೋಣ ಎಂದು ಮುರುಗೇಶ್ ನಿರಾಣಿ ಹೇಳಿದರು.