ಬೆಂಗಳೂರು : ಬಿಜೆಪಿ, ಜೆಡಿಎಸ್ ಅಧಿಕಾಕ್ಕೆ ಬಂದಾಗಲೂ ರಾಜ್ಯದಲ್ಲಿ ಬರಗಾಲ ಬಂದಿದೆ ಎಂದು ಕೃಷಿ ಸಚಿವ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಕುಟುಕಿದರು.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ ಸರ್ಕಾರ ಬಂದಾಗ ಬರಗಾಲ ಬರುತ್ತೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು.
ಅದೆಲ್ಲ ಮುಖ್ಯ ಅಲ್ಲ, ಬ್ಯಾಡ್ ಟೈಮ್. ಮಳೆ ಜಾಸ್ತಿ ಬಂದರು ಕಷ್ಟ, ಕಡಿಮೆ ಬಂದರು ಕಷ್ಟ. ಎಲ್ಲ ಬ್ಯಾಲನ್ಸ್ ಆಗಿರಬೇಕು. ವರದಿ ಪ್ರಕಾರ ಮಳೆ ಆಗುತ್ತೆ ಅಂತಾನೇ ಇದೆ. ಎರಡು ಮೂರು ದಿನಗಳಲ್ಲಿ ಮಳೆ ಆಗುವ ಮುನ್ಸೂಚನೆ ಇದೆ. ಬಿತ್ತನೆ ಬೀಜ, ರಸಗೊಬ್ಬರಕ್ಕೆ ಯಾವುದೇ ಸಮಯ ಇಲ್ಲ. ಮಳೆ ಬಂದರೆ ನಾವು ರೆಡಿ ಇದ್ದೀವಿ. ಮಳೆ ಬರದೆ ಇದ್ರೆ ಏನು ಮಾಡೋಕೆ ಆಗಲ್ಲ ಎಂದು ಬೇಸರಿಸಿದರು.
ಇದನ್ನೂ ಓದಿ : ಯಡಿಯೂರಪ್ಪ ಅಧಿಕಾರಕ್ಕೆ ಬಂದರೆ ಮಳೆ ಬರುತ್ತೆ : ಆರ್. ಅಶೋಕ್
ಶೇ.82 ರಷ್ಟು ಬಿತ್ತನೆ ಕಮ್ಮಿ ಆಗಿದೆ
ಮುಂಗಾರು ಇನ್ನು ಮುಗಿದಿಲ್ಲ. ತಜ್ಞರ ಪ್ರಕಾರ ಐದನೇ ತಾರೀಖಿನವರಿಗೆ ಕಾಯಬಹುದು. ಎರಡು ಮೂರು ದಿನ ಭರವಸೆ ಇದೆ. ವಾಡಿಕೆ ಪ್ರಕಾರ ಇಲ್ಲಿಯವರೆಗೆ 167 ಎಂಎಂ ಮಳೆ ಬೀಳಬೇಕಿತ್ತು. ಆದರೆ, 66 ಎಂಎಂ ಮಳೆ ಆಗಿದೆ. ಶೇ.58 ರಷ್ಟು ಮಳೆ ಕಡಿಮೆ ಆಗಿದೆ. 82 ಲಕ್ಷ ಹೆಕ್ಟೇರ್ ಬಿತ್ತನೆ ಮಾಡಬೇಕಿತ್ತು. ಈಗ 10.20 ಲಕ್ಷ ಹೆಕ್ಟೇರ್ ಬಿತ್ತನೆ ಆಗಿದೆ. ಶೇ.82 ರಷ್ಟು ಬಿತ್ತನೆ ಕಡಿಮೆ ಆಗಿದೆ ಎಂದು ಮಾಹಿತಿ ನೀಡಿದರು.
ದೇವರು ಕರುಣೆ ತೋರಿಸ್ತಾನಾ?
ನಾವು ಇನ್ನು ಒಂದು ವಾರ ಕಾಯ್ತಾ ಇದ್ದೀವಿ. ಮಳೆರಾಯ ಕರ್ನಾಟಕ ಕಡೆ ಬರ್ತಾನಾ ಅಂತ. ಚಂಡಮಾರುತ ಇದ್ದರೂ ಅದು ಯಶಸ್ವಿ ಆಗ್ತಾ ಇಲ್ಲ. ಇವತ್ತು ಮಳೆ ಬರುತ್ತಾ? ನಾಳೆ ಬರುತ್ತಾ? ಅಂತ ವೇಟ್ ಮಾಡ್ತಾ ಇದ್ದೀವಿ. ರಾಜ್ಯ ಪೂರ್ತಿ ಮಳೆ ಕವರ್ ಆಗ್ತಿಲ್ಲ. ಮಳೆ ಸಮಸ್ಯೆ ಇದೆ, ದೇವರು ಕರುಣೆ ತೋರಿಸ್ತಾನಾ? ಕಷ್ಟ ಪರಿಸ್ಥಿತಿಯಲ್ಲಿ ರೈತರು ಇದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.