Sunday, January 19, 2025

ಬೆಂಗಳೂರಿನ ಹಲವೆಡೆ ಜೋರು ಮಳೆ, ರಸ್ತೆಗಳು ಜಲಾವೃತ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ ಭಾನುವಾರ ರಾತ್ರಿ ಧಾರಾಕಾರ ಮಳೆಯಾಗಿದೆ. ಸತತ ಅರ್ಧ ಗಂಟೆಯಿಂದ ಸುರಿದ ಮಳೆಗೆ ಕೆಲವು ರಸ್ತೆಗಳು ಜಲಾವೃತ ಆಗಿದೆ.

ನಗರದ ಪೀಣ್ಯ ಕೈಗಾರಿಕೆ ಪ್ರದೇಶ, ದಾಸರಹಳ್ಳಿ ವ್ಯಾಪ್ತಿಯ ಹಲವು ಭಾಗಗಳಲ್ಲಿ ವರುಣನ ಆರ್ಭಟ ಜೋರಾಗಿತ್ತು. ಸತತವಾಗಿ ಸುರಿದ ಮಳೆಯಿಂದ ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿತು. ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ಉಕ್ಕಿ ಹರಿಯಿತು.

ದಿಢೀರ್ ಸುರಿದ ಮಳೆಯಿಂದ ದ್ವಿಚಕ್ರವಾಹನ ಸವಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ವೀಕೆಂಡ್ ನಿಮಿತ್ತ ಬೇರೆ ಕಡೆ ಹೋಗಿ ಮರಳಿ ಬೆಂಗಳೂರಿನತ್ತ ಪಯಣ ಬೆಳೆಸಿದ್ದವರು ವರುಣನ ಆಗಮನದಿಂದ ಕಿರಿಕಿರಿ ಅನುಭವಿಸಿದರು.

ಇದನ್ನೂ ಓದಿ : ಯಡಿಯೂರಪ್ಪ ಅಧಿಕಾರಕ್ಕೆ ಬಂದರೆ ಮಳೆ ಬರುತ್ತೆ : ಆರ್. ಅಶೋಕ್

ಎಲ್ಲೆಲ್ಲಿ ತುಂತುರ ಮಳೆ

ನಗರದ ಗೊರಗುಂಟೆಪಾಳ್ಯ, ಜಾಲಹಳ್ಳಿ, ಯಶವಂತಪುರ, ಮಲ್ಲೇಶ್ವರಂ, ವಿದ್ಯಾರಣ್ಯಪುರ, ಮೆಜೆಸ್ಟಿಕ್, ಚಾಮರಾಜಪೇಟೆ, ಹೆಬ್ಬಾಳ, ಯಲಹಂಕ, ರಾಜಾಜಿನಗರ, ವಿಜಯನಗರ, ಟೌನ್ ಹಾಲ್, ಶಾಂತಿನಗರ, ಶೇಷಾದ್ರಿಪುರಂ, ವಿಲ್ಸನ್ ಗಾರ್ಡನ್ ಸೇರಿದಂತೆ ಹಲವು ಭಾಗಗಳಲ್ಲಿ ತುಂತುರು ಮಳೆ ಸುರಿದಿದೆ.

ಕರಾವಳಿ ಭಾಗಗಳಲ್ಲಿ ಯೆಲ್ಲೋ ಅಲರ್ಟ್

ಬೆಂಗಳೂರು ಸೇರಿದಂತೆ ರಾಜ್ಯ ವಿವಿಧೆಡೆ ಮುಂಗಾರು ಸಕ್ರಿಯಗೊಂಡಿದೆ. ನಗರದಲ್ಲಿ ಐದಾರು ದಿನ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದಲ್ಲಿ ಐದು ದಿನಗಳ ಕಾಲ ವಾಡಿಕೆ ಮಳೆಗಿಂತ ಹೆಚ್ಚಿನ‌ ಮಳೆಯಾಗುವ ಸಾಧ್ಯತೆಯಿದೆ. ಹಾಗಾಗಿ, ಕರಾವಳಿ ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಅಲ್ಲದೆ, ಮೀನುಗಾರರು ಸಮುದ್ರಕ್ಕೆ‌ ಇಳಿಯದಂತೆ ಹವಾಮಾನ ಇಲಾಖೆಯಿಂದ ‌ಎಚ್ಚರಿಕೆ ನೀಡಿದೆ.

RELATED ARTICLES

Related Articles

TRENDING ARTICLES