ಬೆಂಗಳೂರು : ಬಿಜೆಪಿ ಅಧಿಕಾರದಲ್ಲಿ ಜಾರಿಗೆ ತಂದಿದ್ದ ಪಠ್ಯವನ್ನು ಕೈಬಿಟ್ಟಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ರೋಹಿತ್ ಚಕ್ರತೀರ್ಥ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಭಗತ್ ಸಿಂಗ್ ಪಾಠ ತೆಗೆದು ಹಾಕುವ ಮೂಲಕ ರಾಷ್ಟ್ರ ಪ್ರೇಮಿಗಳ ವಿರುದ್ಧ ಇದ್ದೇವೆ ಎನ್ನೋದನ್ನ ಅವ್ರು ತೋರಿಸಿದ್ದಾರೆ ಎಂದು ಕುಟುಕಿದ್ದಾರೆ.
ಪಠ್ಯ ಬದಲಾವಣೆಗೆ ನಿಯಮ ಇದೆ. ಒಂದು ಸಮಿತಿ ಇದೆ. ನಾಲ್ಕಾರು ಶಿಕ್ಷಕರನ್ನು ಕೂರಿಸಿ ಪಠ್ಯ ಬದಲಾವಣೆ ಅಗತ್ಯವೇ? ಅಂತ ಚರ್ಚೆ ಆಗಬೇಕು. ಆದರೆ, ಈ ರೀತಿ ಯಾವುದು ಆಗಲಿಲ್ಲ. ಯಾವುದೇ ವೇದಿಕೆ ಅಥವಾ ಸಭೆಗೆ ನನ್ನ ಕರೆದರೆ ನಾನು ಚರ್ಚೆಯಲ್ಲಿ ಭಾಗಿ ಆಗೋಕೆ ಸಿದ್ಧನಿದ್ದೆ. ಇವರು ಯಾವುದೇ ಚರ್ಚೆ ಮಾಡದೆ ಸರ್ವಾಧಿಕಾರಿ ರೀತಿ ಪಠ್ಯ ಬದಲಾವಣೆ ಮಾಡಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ.
ಇದನ್ನೂ ಓದಿ : ಇಂದು ಮಾಜಿ ಸಿಎಂ ಭೇಟಿ ಆಗಲಿರುವ ಡಿಸಿಎಂ ಡಿಕೆ ಶಿವಕುಮಾರ್
ಒಂದು ಪಕ್ಷದ ವಿರುದ್ಧ ಕೆಲಸ ಮಾಡ್ತಿದ್ದಾರೆ
ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ನಾನು ತಾತ್ವಿಕವಾಗಿ ವಿರೋಧ ಮಾಡುತ್ತೇನೆ. ನಮ್ಮಲ್ಲಿ ತಪ್ಪಾಗಿದ್ದರೆ ಅದರಲ್ಲಿ ಇದ್ದ ಆಕ್ಷೇಪ ಹೇಳಬೇಕಿತ್ತು. ಇವರು ಸಾವರ್ಕರ್ ಪಾಠ ತೆಗೆದಿದ್ದಾರೆ. ಮಕ್ಕಳಿಗೆ ಇದು ಇಷ್ಟವಾದ ಪಾಠ ಆಗಿತ್ತು. ಇದನ್ನು ಯಾವ ಕಾರಣಕ್ಕೆ ತೆಗೆದಿದ್ದಾರೆ ಗೊತ್ತಾಗ್ತಿಲ್ಲ. ಭಗತ್ ಸಿಂಗ್ ಪಾಠವನ್ನು ತೆಗೆದಿದ್ದಾರೆ. ಮಕ್ಕಳ ಬೌದ್ದಿಕತೆಗೆ ಪರವಾಗಿ ಪಾಠ ಇತ್ತು. ಇವರು ಒಂದು ಪಕ್ಷದ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಅಷ್ಟೇ ಎಂದು ಛೇಡಿಸಿದ್ದಾರೆ.
ನಾವು ಸಮಿತಿ ರಚನೆ ಮಾಡಿ ಚರ್ಚೆ ಮಾಡಿ ತೆಗೆದುಕೊಂಡ ನಿರ್ಧಾರವಾಗಿತ್ತು. ಆದರೆ, ಈಗ ಇವರು ಯಾವ ಸಂದೇಶ ನೀಡ್ತಾ ಇದ್ದಾರೆ ಗೊತ್ತಾಗ್ತಿಲ್ಲ. ಒಂದು ರೀತಿ ಗೊಂದಲ ಹುಟ್ಟು ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ನಡೆಗೆ ಕಳವಳ ವ್ಯಕ್ತಪಡಿಸಿದ್ದಾರೆ.