ಬೆಂಗಳೂರು : ಈ ಸರ್ಕಾರದಲ್ಲಿ ಇದುವರೆಗೂ ಯಾರೂ ನಮ್ಮ ಬಳಿ ಕಮಿಷನ್ ಕೇಳಿಲ್ಲ ಎಂದು ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾವು ಬಾಕಿ ಬಿಲ್ ಗಳ ಬಗ್ಗೆ ಚರ್ಚೆಗೆ ಬಂದಿದ್ವಿ ಎಂದು ತಿಳಿಸಿದರು.
20 ಸಾವಿರ ಕೋಟಿ ರೂಪಾಯಿ ಬಾಕಿ ಬಿಲ್ ಆಗಬೇಕು. ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಫೈನಾನ್ಷಿಯಲ್ ಪರಿಸ್ಥಿತಿ ಚೆನ್ನಾಗಿಲ್ಲ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆಗೆ ಚರ್ಚಿಸಿ ಬಾಕಿ ಬಿಲ್ ಪಾವತಿ ಮಾಡೋದಾಗಿ ಭರವಸೆ ಕೊಟ್ಟಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : ಇನ್ಮೇಲೆ ‘ಕೆಂಪಣ್ಣ 40% ಕಮ್ಮಿಗೆ ಟೆಂಡರ್’ ಹಾಕುವಂತೆ ಹೇಳಬೇಕು : ಬೊಮ್ಮಾಯಿ
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ಅವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳ ನಿಯೋಗ ಇಂದು ಮುಖ್ಯಮಂತ್ರಿ @siddaramaiah ಅವರನ್ನು ಭೇಟಿಯಾಗಿ, ಗುತ್ತಿಗೆದಾರರ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. pic.twitter.com/oQ9xrsTspU
— CM of Karnataka (@CMofKarnataka) June 23, 2023
ಕಮಿಷನ್ ಕೇಳಿದ್ರೆ ನಾನೇ ಬಹಿರಂಗಪಡಿಸ್ತೀನಿ
ಬಿಜೆಪಿ ಅವಧಿಯ ಕಮಿಷನ್ ಆರೋಪ ಬಗ್ಗೆ ನಾವು ಚರ್ಚೆ ಮಾಡಿಲ್ಲ. ಅದು ಬೇರೆ ವಿಚಾರ. ಈಗಿನ ಸಚಿವರು ಕಮಿಷನ್ ಫಿಕ್ಸ್ ಮಾಡಿಕೊಂಡಿದ್ದಾರೆ ಎಂಬ ಬಿಜೆಪಿ ಆರೋಪ ವಿಚಾರ ಕುರಿತು ಮಾತನಾಡಿದ ಅವರು, ಈ ಸರ್ಕಾರದಲ್ಲಿ ಇದುವರೆಗೂ ಯಾರೂ ನಮ್ಮ ಬಳಿ ಕಮಿಷನ್ ಕೇಳಿಲ್ಲ. ಕಮಿಷನ್ ಕೇಳಿದರೆ, ಅದನ್ನು ಸಹ ಬಹಿರಂಗಪಡಿಸುತ್ತೇವೆ. ಮೊದಲು ನಾನೇ ಬಹಿರಂಗಪಡಿಸುತ್ತೇವೆ ಎಂದು ತಿಳಿಸಿದರು.
ಅಡ್ಡಗೋಡೆ ಮೇಲೆ ದೀಪ ಇಟ್ಟ ಕೆಂಪಣ್ಣ
ಬಿಜೆಪಿ ಮೇಲಿನ 40% ಕಮೀಷನ್ ಆರೋಪದ ದಾಖಲಾತಿ ಬಿಡುಗಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಕರಣ ಸದ್ಯ ಕೋರ್ಟ್ ನಲ್ಲಿದೆ. ಅದರ ಕುರಿತ ದಾಖಲಾತಿಗಳನ್ನು ಸಮಯ ಬಂದಾಗ ಬಿಡುಗಡೆ ಮಾಡ್ತೀವಿ ಎನ್ನುವ ಮೂಲಕ ಮತ್ತೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಕೆಂಪಣ್ಣ ಹೇಳಿಕೆ ನೀಡಿದ್ದಾರೆ.