ಚಿಕ್ಕೋಡಿ : ಇವಿಎಂ ಬಳಸಿಕೊಂಡು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಶಾಲಾ ಸಂಸತ್ ಚುನಾವಣೆ ನಡೆಸಿ ಗಮನ ಸೆಳೆದಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಚುನಾವಣೆ ನಡೆದಿದೆ. 2023-24ನೇ ಸಾಲಿನ ಶಾಲಾ ಸಂಸತ್ ಆಡಳಿತ ಮಂಡಳಿಗೆ ಇವಿಎಂ ಬಳಸಿಕೊಂಡು ಚುನಾವಣೆ ನಡೆಸಿದ್ದಾರೆ.
ಶಾಲಾ ಸಂಸತ್ ಚುನಾವಣೆಗೆ ಜೂನ್ 16ರಂದು ಅಧಿಸೂಚನೆ ಪ್ರಕಟಿಸಲಾಗಿತ್ತು. ಜೂನ್ 17ರಂದು ನಾಮಪತ್ರ ಸಲ್ಲಿಕೆ, ಅಂದೇ ನಾಮಪತ್ರ ಪರಿಶೀಲನೆ ಹಾಗೂ ವಾಪಸ್ ಪಡೆಯಲು ಕಡೇ ದಿನವಾಗಿತ್ತು.
ಇದನ್ನೂ ಓದಿ : ಮೋದಿ ಓದಿದ ಶಾಲೆ ಅಧ್ಯಯನ ಕೇಂದ್ರವಾಗಿ ನವೀಕರಣ
ಜೂನ್ 17 ಹಾಗೂ ಜೂನ್ 18ರಂದು ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ (ವಿದ್ಯಾರ್ಥಿಗಳ) ಬಹಿರಂಗ ಪ್ರಚಾರಕ್ಕೆ ಅವಕಾಶ ನೀಡಲಾಗಿತ್ತು. ಕಣದಲ್ಲಿದ್ದ ಅಭ್ಯರ್ಥಿಗಳು ವಿದ್ಯಾರ್ಥಿಗಳ ಮನೆ-ಮನೆಗೆ ತೆರಳಿ ಪ್ರಚಾರ ಕೈಗೊಂಡಿದ್ದರು.
ಜೂನ್ 19ರಂದು ಮಧ್ಯಾಹ್ನ 2.30 ರಿಂದ 4.30 ರವರೆಗೆ ಮತದಾನ ಪ್ರಕ್ರಿಯೆ ನಡೆದಿತ್ತು. ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿಯೇ ಚುನಾವಣಾಧಿಕಾರಿ ಮತ್ತು ಸಿಬ್ಬಂದಿ ನೇಮಕ ಮಾಡಲಾಗಿತ್ತು. ಇದು ಚುನಾವಣೆ ಅಣಕು ಪ್ರದರ್ಶನವಲ್ಲ ಅನ್ನೋದು ಮತ್ತೊಂದು ವಿಶೇಷ. ಶಾಲಾ ಶಿಕ್ಷಕರ ಈ ಕಾರ್ಯಕ್ಕೆ ಪೋಷಕರು ಹಾಗೂ ಬಂಬಲವಾಡ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.