ಬೆಂಗಳೂರು : ಹಾಲಿ ದರವನ್ನು ಹೆಚ್ಚು ಮಾಡುವುದರ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ.
ಕೆಎಂಎಫ್ (ಕರ್ನಾಟಕ ಹಾಲು ಒಕ್ಕೂಟ) ಅಧ್ಯಕ್ಷರಾಗಿ ಭೀಮಾನಾಯ್ಕ್ ಆಯ್ಕೆಯಾದ ಸಂದರ್ಭದಲ್ಲಿ ಮಾತನಾಡಿರುವ ಅವರು, ರೈತರಿಂದ ಖರೀದಿ ಮಾಡುವ ಹಾಲಿನ ಮೇಲೆ ಪ್ರೋತ್ಸಾಹ ದರ ಹಾಗೂ ಗ್ರಾಹಕರಿಗೆ ನೀಡುವ ಹಾಲಿನ ದರವನ್ನು ಹೆಚ್ಚಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಕೆಎಂಎಫ್ ಜತೆ ಅಮುಲ್ ವಿಲೀನ ಇಲ್ಲ. ಅಮುಲ್ ಜತೆ ಕೆಎಂಎಫ್ ವಿಲೀನ ಮಾಡೋದು ಹುಚ್ಚತನ. ಯಾವುದೇ ಕಾರಣಕ್ಕೂ ಕೆಎಂಎಫ್ ಜತೆ ಅಮುಲ್ ವಿಲೀನವಿಲ್ಲ ಎಂದು ಕೆ.ಎನ್ ರಾಜಣ್ಣ ಸ್ಪಷ್ಟನೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಭೀಮಾನಾಯ್ಕ ಅವರು, ಸದ್ಯ ಎಲ್ಲಾ ಬೋರ್ಡ್ಗಳು 5 ರೂ. ಏರಿಕೆಗೆ ಬೇಡಿಕೆ ಇಟ್ಟಿದ್ದಾರೆ. ಇದನ್ನ ಸಿಎಂ ಮುಂದೆ ಇಡ್ತಿವಿ. ಸಿಎಂ ಏನು ತೀರ್ಮಾನ ಮಾಡ್ತರೋ ಮಾಡಲಿ. ನಮ್ಮ ಬೇಡಿಕೆ 5 ರೂ. ಏರಿಸಬೇಕೆಂದಿದೆ ಎಂದು ಹೇಳಿದ್ದಾರೆ.
ಲೀಟರ್ ಗೆ 5 ರೂ. ಹೆಚ್ಚಳ
ರೈತರಿಗೆ 5 ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಪ್ರೋತ್ಸಾಹಧನ ಮೊತ್ತವನ್ನು ಇನ್ನೂ 2 ರೂ. ಹೆಚ್ಚಳ ಮಾಡುವ ಬಗ್ಗೆ ತೀರ್ಮಾನ ಇದೆ. ಆದ್ದರಿಂದ ಗ್ರಾಹಕರಿಕೆ ಮಾರಾಟ ಮಾಡುವ ನಂದಿನಿ ಹಾಲಿನ ಪ್ರತಿ ಲೀಟರ್ ಗೆ 5 ರೂ. ಹೆಚ್ಚಳ ಮಾಡುವಂತೆ ಮನವಿ ಮಾಡಲಾಗಿದೆ ಎಂದಿದ್ದಾರೆ.