ಬೆಳಗಾವಿ : ಕೇಂದ್ರ ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ ಹಾಗೂ ಹೃದಯವಂತೂ ಮೊದಲೇ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿಕಾರಿದ್ದಾರೆ.
ಬೆಳಗಾವಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ.
ನಮ್ಮ ಹೋರಾಟ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟುತ್ತೊ ಇಲ್ವೊ ಆಮೇಲೆ ನೋಡೊಣ. ಮೊದಲು ೨೫ ಜನ ಸಂಸದರು ಕಣ್ಣು ತೆಗೆಯಲಿ. ಒಂದು ವರ್ಷದಲ್ಲಿ ಲೋಕಸಭಾ ಚುನಾವಣೆ ಬರಲಿದೆ. ಮಹಾಜನತೆ ಅರ್ಥ ಮಾಡ್ಕೊಳಲಿ, ಚುನಾವಣೆ ಬಂದಾಗಲೇ ಜನರ ಓಲೈಕೆಗೆ ಬರ್ತಾರೆ. ಆದರೆ, ಇವತ್ತು ಬಡವರಿಗೆ ನೀಡಬೇಕಾದ ಅಕ್ಕಿಯನ್ನು ತಡೆಯುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಿಹಾರಕ್ಕೆ ೨ ಲಕ್ಷ ಕೋಟಿ ಕೊಡ್ತಿನಿ ಅಂದ್ರಿ. ಅಲ್ಲಿ ನಿತೀಶ ಕುಮಾರ್ ಅವರನ್ನ ಕೇಳಿ ದುಡ್ಡು ಕೊಟ್ರಾ? ಪಂಜಾಬ್ ನಲ್ಲಿ ಲಕ್ಷ ಕೋಟಿ ಕೊಡ್ತಿನಿ ಅಂದ್ರಿ, ಅಲ್ಲಿರೋರಿಗೆ ಹೇಳಿ ಘೋಷಣೆ ಮಾಡಿದ್ರಾ? ಪಶ್ಚಿಮ ಬಂಗಾಳದಲ್ಲಿ ಘೋಷಣೆ ಮಾಡುವಾಗ ಮಮತಾ ಬ್ಯಾನರ್ಜಿನಾ ಕೇಳಿದ್ರಾ? ಸುಮ್ಮನೆ ಮಾತಾಡೋದು ಬೇಡ. ನಾವು ಯಾರನ್ನೂ ಕೇಳಿ ಘೋಷಣೆ ಮಾಡಿಲ್ಲ ಎಂದು ಗುಡುಗಿದ್ದಾರೆ.
ಇದನ್ನೂ ಓದಿ : ಮೋದಿ ಅವರನ್ನ ಬೈದ್ರೆ, ಆಕಾಶಕ್ಕೆ ಉಗುಳಿದಂತೆ : ಬಸವರಾಜ ಬೊಮ್ಮಾಯಿ
ಬಡವರ ಜೊತೆ ರಾಜಕಾರಣ ಮಾಡುತ್ತಿದೆ
ಕರ್ನಾಟಕದ ಜನರಿಗಾಗಿ ನಾವು ಯೋಜನೆ ಘೋಷಣೆ ಮಾಡಿದ್ದೇವೆ. ಕರ್ನಾಟಕಕ್ಕೆ ಒಂದು ವರ್ಷಕ್ಕೆ ೪ ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ ಆಗಿ ಹೋಗುತ್ತೆ. ಮಹಾರಾಷ್ಟ್ರ ಬಿಟ್ರೆ ಹೆಚ್ಚು ಜಿಎಸ್ಟಿ ಕೊಡುವ ರಾಜ್ಯ ಕರ್ನಾಟ. ಅದರಲ್ಲಿ ನಮಗೆ ಕೇಂದ್ರ ಕೊಡೋದು ೩೭ ಸಾವಿರ ಕೋಟಿ. ಇದು ಯಾರಿಗೆ ಆಗುತ್ತೆ? ಕೇಂದ್ರ ಸರ್ಕಾರ ಬಡವರ ಜೊತೆ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮೋದಿ ಸಾಹೇಬ್ರು ಜೊತೆ ಮಾತಾಡಿದ್ದೀರಾ?
೨೫ ಜನ ಸಂಸದರಿದ್ದಾರೆ. ಯಾರಾದ್ರೂ ಒಬ್ಬರು ಬಾಯಿ ಬಿಟ್ಟಿದಾರಾ? ಮೋದಿ ಸಾಹೇಬ್ರು ಜೊತೆ ಮಾತಾಡಿದ್ದಾರಾ? ಅಧಿವೇಶನದಲ್ಲಿ ಮಾತಾಡಿದ್ದಾರಾ? ಇವತ್ತು ಅಕ್ಕಿ ಕೊಡ್ತಾ ಇಲ್ಲ, ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ. ಅವರಿಗೆ ಹೊಟ್ಟೆ ಕಿಚ್ಚು ಅದಕ್ಕೆ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಸಿಎಂ, ಡಿಕೆಶಿ, ಮುನಿಯಪ್ಪ ಸೇರಿ ಎಲ್ಲರೂ ಸಹ ಬಹಳಷ್ಟು ರಾಜ್ಯ ಸರ್ಕಾರಗಳ ಜತೆಗೆ ಸಂಪರ್ಕದಲ್ಲಿದ್ದೀವಿ. ಜುಲೈ ೧ರಂದು ಅಕ್ಕಿಯನ್ನ ಕೊಡುವ ವಾಗ್ದಾನ ಇದೆ. ಖಂಡಿತ ನಮ್ಮ ವಾಗ್ದಾನ ಪೂರೈಸುತ್ತೆವೆ ಎಂದು ಭರವಸೆ ನೀಡಿದ್ದಾರೆ.