Monday, December 23, 2024

ದೇಶ ಸೇವೆ ಕನಸು ನನಸು : ಭಾರತೀಯ ಸೇನೆ ಸೇರಿಕೊಂಡ ಅಂಕೋಲಾ ಶ್ವಾನಗಳು

ಕಾರವಾರ : ತಾನು ಸೈನ್ಯದಲ್ಲಿ ಸೇವೆ ಸಲ್ಲಿಸಲು ಆಗಲಿಲ್ಲ ಎಂದು ತನ್ನ ಶ್ವಾನಗಳನ್ನ ಸೈನ್ಯಕ್ಕೆ ಸೇರಿಸುವ ಮೂಲಕ ದೇಶಪ್ರೇಮಿಯೊಬ್ಬ ತನ್ನ ಕನಸನ್ನು ನನಸಾಗಿಸಿಕೊಂಡಿದ್ದಾರೆ.

ಅಂಕೋಲಾ ತಾಲೂಕಿನ ಬಾವಿಕೇರಿಯ ರಾಘವೇಂದ್ರ ಭಟ್ ಅವರೇ ಶ್ವಾನಗಳ ಮೂಲಕ ದೇಶ ಸೇವೆ ಕನಸು ನನಸಾಗಿಸಿಕೊಂಡವರು. ಇವರು ಸಾಕಿದ್ದ ಬೆಲ್ಲಿಯಂ ಮೆಲಿನೋಟ್ಸ್ ತಳಿಯ ನಾಯಿ ಮರಿಗಳೇ ಈಗ ದೇಶ ಕಾಯಲು ಹೊರಟಿರುವ ಶ್ವಾನಗಳು.

ರಾಘವೇಂದ್ರ ಭಟ್ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ. ಆದರೆ, ಅವರಿಗೆ ಸೈನ್ಯದಲ್ಲಿ ಸೇವೆ ಸಲ್ಲಿಸಬೇಕೆಂಬ ಮಹದಾಸೆ ಇತ್ತು. ಆದ್ರೆ, ಆಸೆ ಈಡೇರಲಿಲ್ಲ. ತಾನು ಸೈನ್ಯ ಸೇರಲು ಸಾಧ್ಯವಾಗದಿದ್ದರೂ ತಮ್ಮ ಶ್ವಾನಗಳನ್ನ ಸೈನ್ಯಕ್ಕೆ ಸೇರಿಸುವ ಮೂಲಕ ಕನಸಿನ ತನ್ನ ಆಸೆ ಈಡೇರಿಸಿಕೊಂಡಿದ್ದಾರೆ.

ಆಸ್ಸಾಂ ಸೇನಾ ತರಬೇತಿ ಕೇಂದ್ರಕ್ಕೆ ಶಿಫ್ಟ್

ಈ ನಾಯಿಗಳು ತುಂಬಾನೆ ಚುರುಕು. ಯಾರಾದರೂ ಮುಟ್ಟಿದ್ರೇ ಇಡೀ ತಂಡವೇ ಬಂದು ಒಮ್ಮೆಲೆ‌ ಸರ್ಜಿಕಲ್ ದಾಳಿ ಮಾಡುತ್ತವೆ. ಈ ವಿಶೇಷ ತಳಿಯ ನಾಯಿಯ ಕಾರ್ಯಕ್ಷಮತೆಯನ್ನು ಗಮನಿಸಿದ ಭಾರತೀಯ ಸೇನೆಯ ಅಧಿಕಾರಿಗಳು ಅಂಕೋಲಾಕ್ಕೆ ಆಗಮಿಸಿದ್ದರು. 17 ನಾಯಿ ಮರಿಗಳನ್ನು ಸೇನಾ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲು ಕೊಂಡೊಯ್ದಿದ್ದಾರೆ. ಆಸ್ಸಾಂನ ಸೇನಾ ತರಬೇತಿ ಕೇಂದ್ರಕ್ಕೆ ನಾಯಿ ಮರಿಗಲನ್ನು ಸಾಗಿಸಿದ್ದು, ಮುಂದೆ ಭಾರತೀಯ ಸೇನೆಯ ವಿಶೇಷ ಪಾಲನೆಯಲ್ಲಿ ಬೆಳೆಯಲಿವೆ ಹಾಗೂ ತರಬೇತಿಯನ್ನೂ ಪಡೆದುಕೊಳ್ಳಲಿವೆ.

ಸೋಶಿಯಲ್ ಮೀಡಿಯಾ ಮೂಲಕ ಸಂಪರ್ಕ

ನಾಯಿಗಳು ಬೆಂಗಳೂರಿನ ಪೊಲೀಸ್ ಇಲಾಖೆ, ಬೆಳಗಾವಿ ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಈ ಮೆಲಿನೋಟ್ಸ್ ಜಾತಿಯ ನಾಯಿಗಳ ಕಾರ್ಯಕ್ಷಮತೆ ಗಮನಿಸಿದ ಭಾರತೀಯ ಸೇನೆಯ ಅಧಿಕಾರಿಗಳು, ಸೋಶಿಯಲ್ ಮೀಡಿಯಾ ಮೂಲಕ ರಾಘವೇಂದ್ರ ಭಟ್ಟರನ್ನು ಸಂಪರ್ಕಿಸಿದ್ದರು. ಬಳಿಕ ಭಾವಿಕೇರಿಗೆ ಆಗಮಿಸಿ ಒಬ್ಬ ಜವಾನನ್ನು ಸ್ಥಳದಲ್ಲಿ ನೇಮಿಸಿದ್ದರು.

45 ದಿನ ನಾಯಿ ಮರಿಗಳ ಅಧ್ಯಯನ

ನಾಯಿ ಮರಿಗಳ ಚಲನವಲನ, ಆಹಾರ ಪದ್ಧತಿ, ಬುದ್ಧಿಮತಿ, ಆರೋಗ್ಯ ಮೊದಲಾದ ಮಾಹಿತಿಗಳನ್ನು ನಿತ್ಯ ಪಡೆದುಕೊಂಡಿದ್ದರು. ನಾಯಿ ಮರಿಗಳ ಕುರಿತು ಅಧ್ಯಯನ ನಡೆಸಲು ಸೇನೆಯ ಜವಾನ ಬರೋಬ್ಬರಿ 45 ದಿನಗಳ ಕಾಲ ಭಾವಿಕೇರಿಯಲ್ಲಿ ಉಳಿದುಕೊಂಡಿದ್ದರು. ನಂತರ ಅಧಿಕಾರಿಗಳ ತಂಡ ನಾಯಿ ಮರಿಗಳನ್ನು ವಿಶೇಷ ಹವಾ ನಿಯಂತ್ರಿತ ಬಸ್ಸಿನಲ್ಲಿ ಆಸ್ಸಾಂಗೆ ಸಾಗಿಸಿದೆ. ಇದೀಗ ಈ ನಾಯಿ ಮರಿಗಳು ಇಂಡಿಯನ್ ಮಿಲಿಟರಿಯಲ್ಲಿ ತಮ್ಮ ಛಾಪು ಮೂಡಿಸಲಿದೆ.

ರಾಘವೇಂದ್ರ ಭಟ್ಟಗೆ ನಾಯಿ ಸಾಕುವುದರಲ್ಲಿ ಅಪಾರ ಪ್ರೀತಿಯಿದೆ. ವಿವಿಧ ತಳಿಯ ಹಲವಾರು ಶ್ವಾನಗಳನ್ನು ಇವರು ಸಾಕಿದ್ದಾರೆ. ಅದರಂತೆ ಇವರು ಸಾಕಿರುವ ಬೆಲ್ಲಿಯಂ ಮೆಲಿನೋಟ್ಸ್ ತಳಿಯ ನಾಯಿಗಳು ದೇಶ ಸೇವೆಗೆ ತೆರಳಿವೆ. ಈ ಮೂಲಕ ರಾಘವೇಂದ್ರ ಭಟ್, ತಾನು ಸಾಕಿದ ನಾಯಿ ಮರಿಗಳನ್ನು ಸೈನ್ಯಕ್ಕೆ ಸೇರಿಸಿ ದೇಶ ಸೇವೆ ಕನಸನ್ನು ಸಾಕಾರಗೊಳಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES