ವಿಜಯಪುರ : ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಬ್ರ್ಯಾಂಡ್ ಬೆಂಗಳೂರು ಕುರಿತು ವಿಧಾನಸೌಧದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಕನ್ನಡವನ್ನು ಕಡೆಗಣಿಸಲಾಗಿದೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಸಾರ್! ಕರ್ನಾಟಕ ಸರ್ಕಾರದ ಸಭೆಯಲ್ಲಿ ‘ಕನ್ನಡ’ ಎಲ್ಲಿ? ಎಂದು ಪ್ರಶ್ನೆ ಮಾಡಿದ್ದಾರೆ.
ಸಚಿವ ಕೃಷ್ಣಭೈರೆಗೌಡ ಮಾಡಿರುವ ಟ್ವೀಟ್ ಅನ್ನು ರೀಟ್ವೀಟ್ ಮಾಡಿ, ಬಿಜೆಪಿ ಅಧಿಕಾರದಲ್ಲಿದ್ದಾಗ ಕನ್ನಡ ಭಾಷೆಯನ್ನು ಕಡೆಗಣಿಸುತ್ತಿದೆ ಅಂತ ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದರು. ಇದೀಗ ಅಧಿಕಾರಕ್ಕೆ ಬಂದ ಮೇಲೆ ತಾವೇ ಕನ್ನಡವನ್ನು ಕಡೆಗಣಿಸಿದ್ದಾರೆ ಎಂದು ಛೇಡಿಸಿದ್ದಾರೆ.
ಇದಕ್ಕೆ ನೆಟ್ಟಿಗರು ಕಾಮೆಂಟ್ ಹರಿಬಿಟ್ಟಿದ್ದಾರೆ. ಅಪರೂಪಕ್ಕೆ ಶಾಸಕ ಯತ್ನಾಳ್ ಅವರು ಕನ್ನಡದ ಬಗ್ಗೆ ಕಾಳಜಿ ತೋರಿಸ್ತಾ ಇರೋದು ನೋಡಿ ನಂಗೆ ಆಶ್ಚರ್ಯ ಆಗ್ತಾ ಇದೆ. ಇದು ನಾಟಕೀಯವೋ, ತೋರಿಕೆಗೋ ಅಥವಾ ಸಿದ್ದರಾಮಯ್ಯ ಸರ್ಕಾರವನ್ನು ತೆಗಳೋಕೋ ಗೊತ್ತಿಲ್ಲ. ಒಟ್ನಲ್ಲಿ ಕನ್ನಡ ಕೇಳ್ತಾ ಇರೋದು ನೋಡಿ ಖುಷಿ ಆಗ್ತಾ ಇದೆ ಎಂದು ಹೇಳಿದ್ದಾರೆ.
ಸಾರ್! ಕರ್ನಾಟಕ ಸರ್ಕಾರದ ಸಭೆಯಲ್ಲಿ "ಕನ್ನಡ" ಎಲ್ಲಿ? https://t.co/4Vm97b9oEq
— Basanagouda R Patil (Yatnal) (@BasanagoudaBJP) June 17, 2023
ಇದನ್ನೂ ಓದಿ : ಕಾಂಗ್ರೆಸ್ ಒಮ್ಮೆ ಅಲ್ಲ, ಪ್ರತಿ ಬಾರಿಯೂ ಸುಳ್ಳು ಆರೋಪ ಮಾಡುತ್ತೆ : ತೇಜಸ್ವಿ ಸೂರ್ಯ
ಕನ್ನಡದಲ್ಲಿ ಎಡಿಟ್ ಮಾಡಿ ಇಟ್ಕೊಳ್ಳಿ
ಕರ್ನಾಟಕದಲ್ಲಿ ಎಲ್ಲ ಸರ್ಕಾರಿ ಕಾರ್ಯಕ್ರಮವು ನಮ್ಮ ಕನ್ನಡದಲ್ಲೇ ಇರಲಿ, ಇರ್ಬೇಕು ಆಮೇಲೆ ಇಂಗ್ಲಿಷ್ ಹಿಂದಿ ಎಲ್ಲ. ಶಾಸಕ ಯತ್ನಾಳ್ ಅವರೇ, ಮೊದಲು ನೀವು ನಿಮ್ಮ ಟ್ವಿಟರ್ ಇಂಗ್ಲಿಷ್ ನಿಂದ ಕನ್ನಡದಲ್ಲಿ ಎಡಿಟ್ ಮಾಡಿ ಇಟ್ಕೊಳ್ಳಿ. ಆಮೇಲೆ ಬೇರೆಯವರಿಗೆ ಹೇಳಿದ್ರೆ ಚೆನ್ನಾಗೀರುತ್ತೆ ಅಂತ ನೆಟ್ಟಿಗರು ಕಾಮೆಂಟ್ ಹರಿಬಿಟ್ಟಿದ್ದಾರೆ.
ಬೆಟರ್ ಬೆಂಗಳೂರು ಮಾಡುತ್ತೇವೆ
ಬ್ರ್ಯಾಂಡ್ ಬೆಂಗಳೂರು ಹಾಗೂ ಬೆಟರ್ ಬೆಂಗಳೂರು ಮೂಲಕ ಗ್ಲೋಬಲ್ ಬೆಂಗಳೂರು ನಿರ್ಮಾಣ ಮಾಡುವುದೇ ನಮ್ಮ ಧ್ಯೇಯ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನ ವೈಭವವನ್ನು ಮರಳಿ ತರುವ ಪ್ರಯತ್ನದಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದು ಬ್ರ್ಯಾಂಡ್ ಬೆಂಗಳೂರು ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಈ ವೇಳೆ ಬೆಂಗಳೂರನ್ನು ಅಭಿವೃದ್ಧಿಪಡಿಸುವ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು ಎಂದಿದ್ದಾರೆ.