ಬೆಂಗಳೂರು : ಕಾಂಗ್ರೆಸ್ ನ ‘ಶಕ್ತಿ’ ಯೋಜನೆ ರಾಜ್ಯದ ಜನರನ್ನು ತಮ್ಮ ಪೂಜ್ಯ ಸ್ಥಳಗಳಿಗೆ ಮತ್ತಷ್ಟು ಹತ್ತಿರ ಮಾಡಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸಂತಸ ವ್ಯಕ್ತಡಿಸಿದ್ದಾರೆ.
ಶಕ್ತಿ ಯೋಜನೆ ಯಶಸ್ಸಿನ ಬಗ್ಗೆ ಟ್ವೀಟ್ ಮಾಡಿರುವ ಅವರು, ಹಿಂದುತ್ವ ಜನರನ್ನು ಧರ್ಮದ ದಾರಿಯಲ್ಲಿ ಸಾಗಿಸುವ ಬದಲಿಗೆ ಸಮಾಜವನ್ನು ಇಬ್ಬಾಗಿಸುವ ದ್ವೇಷ ಹಾಗೂ ಅಸೂಯೆಯ ಕೂಪಕ್ಕೆ ತಳ್ಳಿತ್ತು ಎಂದು ತಿಳಿಸಿದ್ದಾರೆ.
ದ್ವೇಷಕ್ಕೆ ಜನರನ್ನ ದೇವರ ಬಳಿ ಕರೆದೊಯ್ಯಲು ಸಾಧ್ಯವಿಲ್ಲ. ಆದರೆ, ಪ್ರೀತಿ ಹಾಗೂ ಕಾಂಗ್ರೆಸ್ ನ ‘ಶಕ್ತಿ’ ಜನರನ್ನ ತಮ್ಮ ಪೂಜ್ಯ ಸ್ಥಳಗಳಿಗೆ ಮತ್ತಷ್ಟು ಹತ್ತಿರ ಮಾಡಿದೆ. ಶಕ್ತಿ ಯೋಜನೆಯಿಂದಾಗಿ ದೇವಸ್ಥಾನ ಹಾಗೂ ಪೂಜಾ ಕೇಂದ್ರಗಳಿಗೆ ಬರುವ ಭಕ್ತರ ಸಂಖ್ಯೆ ದ್ವಿಗುಣವಾಗಿದೆ. ಜನರ ಅಂತರಾಳದಲ್ಲಿ ಪೂಜಿಸುವ, ಪ್ರೀತಿಸುವ ಭಾವನೆಯನ್ನು ಸಬಲಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಇಂದಿನಿಂದ ಉಚಿತ ವಿದ್ಯುತ್‌ಗೆ ಅರ್ಜಿ ಸಲ್ಲಿಕೆ ಆರಂಭ ; ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ
ಧರ್ಮವನ್ನು ಗೆಲ್ಲಿಸಲು ‘ಶಕ್ತಿ’ಯುತ ಹೆಜ್ಜೆ
ಇದರಿಂದ ರಾಜ್ಯದ ಎಲ್ಲ ದೇವಸ್ಥಾನಗಳ ಸುತ್ತಲಿನ ಸಾವಿರಾರು ಸಣ್ಣ ವ್ಯಾಪಾರಿಗಳಿಗೆ ನೇರ ಅನುಕೂಲ ಸಿಗಲಿದೆ. ಅಲ್ಲಿನ ಆರ್ಥಿಕ ಪ್ರಗತಿಯ ವೇಗ ಕೂಡ ದ್ವಿಗುಣಗೊಳ್ಳಲಿದೆ. ದ್ವೇಷ ಕೇಂದ್ರಿತ ಅಧರ್ಮವನ್ನು ಸೋಲಿಸಿ, ಪ್ರೀತಿ ಹಾಗೂ ಸಹಬಾಳ್ವೆ ಕೇಂದ್ರಿತ ಧರ್ಮವನ್ನು ಗೆಲ್ಲಿಸಲು ನಾವು ‘ಶಕ್ತಿ’ಯುತ ಹೆಜ್ಜೆ ಇಟ್ಟಿದ್ದೇವೆ ಎಂದು ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಶಕ್ತಿ ಯೋಜನೆ ಜಾರಿ ಆದ ಬಳಿಕ ಇದೇ ಮೊದಲ ವೀಕೆಂಡ್ ಆಗಿದ್ದು ರಾಜ್ಯಾದ್ಯಂತ ಬಹುತೇಕ ಪುಣ್ಯ ಕ್ಷೇತ್ರಗಳು ಮಹಿಳೆಯರಿಂದ ತುಂಬಿ ತುಳುಕುತ್ತಿವೆ. ಇಂದು ವೀಕೆಂಡ್ ಹಾಗೂ ಅಮಾವಾಸ್ಯೆ ಹಿನ್ನೆಲೆ ಮಹಿಳೆಯರು ಕುಟುಂಬ ಸಮೇತರಾಗಿ ಧರ್ಮ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಂಗಳೂರು, ಶೃಂಗೇರಿ, ಹೊರನಾಡು, ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುವ ಬಸ್ಗಳು ತುಂಬಿ ತುಳುಕುತ್ತಿವೆ.