ಗದಗ : ಆರ್. ಅಶೋಕ್ ಅವರನ್ನ ಕೇಳಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ಗೆ ಸೈನ್ ಮಾಡಬೇಕಿತ್ತಾ? ಎಂದು ಸಚಿವ ಹೆಚ್.ಕೆ ಪಾಟೀಲ್ ಗರಂ ಆಗಿದ್ದಾರೆ.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಫ್ರೀ ಕೊಟ್ಟು ಆಮೇಲೆ ಪೆಟ್ರೋಲ್ ಬೆಲೆ ಹೆಚ್ಚಳದ ಗ್ಯಾರಂಟಿ ಎಂದಿದ್ದ ಆರ್. ಅಶೋಕ್ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ. 400 ರೂಪಾಯಿ ಇದ್ದ ಸಿಲಿಂಡರ್ ಬೆಲೆ 1,200 ಮಾಡಿದ್ದು ಪ್ರಧಾನಿ ಮೋದಿ ಸರ್ಕಾರ. ಅಶೋಕ್ ಅವರು ಜನರಿಗೆ ತಪ್ಪು ಮಾಹಿತಿ ಕೊಡೋದು ಸರಿಯಲ್ಲ ಎಂದು ಛೇಡಿಸಿದ್ದಾರೆ.
12ನೇ ತಾರೀಖು ಕೇಂದ್ರ ಸರ್ಕಾರದ ಅಂಗ ಸಂಸ್ಥೆ ಎಫ್ ಸಿಐ ಪತ್ರ ಬರೆದಿತ್ತು. ಎಷ್ಟು ಅವಶ್ಯಕತೆ ಇದೆ ಅಷ್ಟು ಅಕ್ಕಿ ಕೊಡುತ್ತೇವೆ ಅಂತ ಹೇಳಿತ್ತು. ಎಫ್ ಸಿಐ ಡೆಪ್ಯೂಟಿ ಜನರಲ್ ಮ್ಯಾನೇಜರ್ ಮುಖ್ಯಮಂತ್ರಿಗಳ ಜೊತೆಗೂ ಮಾತಾಡಿದ್ದರು. ಇನ್ನೇನು ಪ್ರಕ್ರಿಯೆ ಆರಂಭಿಸಬೇಕು ಎನ್ನುವಷ್ಟರಲ್ಲಿ ರಾಜ್ಯಗಳಿಗೆ ಅಕ್ಕಿ ಕೊಡಲ್ಲ ಅಂದ್ರು ಎಂದಿದ್ದಾರೆ.
ಖಾಸಗಿಯವರಿಗೆ ಮಾರಲು ಹೊರಟಿದ್ದಾರೆ
13ನೇ ತಾರೀಖು ಎಫ್ ಸಿಐ ಪತ್ರ ಬರೆದು ಈಶಾನ್ಯ ರಾಜ್ಯ ಹೊರತುಪಡಿಸಿ ಬೇರೆ ರಾಜ್ಯಗಳಿಗೆ ಅಕ್ಕಿ ಕೊಡಲ್ಲ ಅಂತ ತಿಳಿಸಿದೆ. ಎಫ್ ಸಿಐ ಬಳಿ 15 ಲಕ್ಷ ಮೆಟ್ರಿಕ್ ಟನ್ ಇದೆ. ಖಾಸಗಿಯವರಿಗೆ ಮಾರಾಟ ಮಾಡಲು ಹೊರಟಿದ್ದಾರೆ. ನಮಗೆ ಬೇಕಾಗಿದ್ದು 2 ಲಕ್ಷ 8 ಸಾವಿರ ಟನ್ ಅಕ್ಕಿ ಮಾತ್ರ. ಆದರೆ, ರಾಜ್ಯಗಳಿಗೆ ಕೊಡಬೇಡಿ, ಖಾಸಗಿಯವರಿಗೆ ಮಾರಾಟ ಮಾಡಿ ಅಂತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ದೇವೇಗೌಡರನ್ನೇ ಸಿದ್ದರಾಮಯ್ಯ ಆಟ ಆಡಿಸಿದವರು, CM ಸ್ಥಾನ ಬಿಟ್ಕೊಡ್ತಾರಾ? : ಆರ್. ಅಶೋಕ್
ಪಾಠ ಕಲಿಸಿದರೂ ಬುದ್ಧಿ ಬಂದಿಲ್ವಾ?
ಎಲ್ಲಿದ್ದೀರಿ. ಕರ್ನಾಟಕದ ಜನ ಪಾಠ ಕಲಿಸಿದರೂ ಬುದ್ಧಿ ಬಂದಿಲ್ವಾ? ಯಾವ ಮಟ್ಟದಲ್ಲಿ ರಾಜಕಾರಣ ಮಾಡುತ್ತಿದ್ದೀರಿ? ಜನಪರ ಕಾರ್ಯಕ್ರಮಗಳ ಕುತ್ತಿಗೆ ಹಿಸುಕಿವ ಕೆಲಸ ಮಾಡಿದರೇ ನೆಟ್ಟಗಾಗಲ್ಲ. ಫುಡ್ ಕಾರ್ಪೊರೇಷನ್ ಆಫ್ ಇಂಟಿಯಾ ಮಾರಾಟ ಮಾಡೋದಕ್ಕೆ ಇರೋದು. ನೀವು ನಮಗೆ ಕೊಡಬೇಡಿ. ಖಾಸಗಿಯವರಿಗೆ ಕೊಡಿ ಅಂದ್ರೆ ಹೇಗೆ? ಸಂವಿಧಾನದ ಸದಾಶಯಗಳನ್ನ ಮೊಟಕುಗೊಳಿಸಲು ಪ್ರಯತ್ನ ಮಾಡಿದ್ದೀರಿ. ನಾವೇನು ಫ್ರೀ ಕೇಳಿಲ್ಲ, ಹಣ ಕೊಟ್ಟು ಪಡೀತೀವಿ. ರಾಜ್ಯದ ಸಂಪಂತ್ತಿನಿಂದ ದುಡ್ಡು ಖರ್ಚು ಮಾಡುತ್ತೇವೆ. ನಮಗೆ ಸಾಂವಿಧಾನಿಕ ಹಕ್ಕಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಹಾದಾಯಿ ವಿಷಯವಾಗಿ ಗೋವಾದೊಂದಿಗೆ ಹೋರಾಟ ಎಂಬ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಅವರು, ಮಹದಾಯಿ ವಿಚಾರದಲ್ಲಿ ಮಹಾರಾಷ್ಟ್ರ ಏನೂ ಸಂಪರ್ಕ ಬರಲ್ಲ. ನೆರೆ ರಾಜ್ಯ ಗೋವಾವನ್ನು ಪಕ್ಷದ ಆಧಾರದಲ್ಲಿ ಕರೆದುಕೊಂಡು ತಗಾದೆ, ತಂಟೆ ತೆಗೆದರೆ ಅಪರಾಧ ಎಂದು ಸಚಿವ ಹೆಚ್.ಕೆ ಪಾಟೀಲ್ ಹೇಳಿದ್ದಾರೆ.