ಹಾಸನ : ನನಗೆ ಹಾಸನ ಜಿಲ್ಲೆ ಉಸ್ತುವಾರಿ ಯಾಕೆ ಕೊಟ್ಟಿದಾರೊ ಗೊತ್ತಿಲ್ಲ. ನಾನು ನಿರೀಕ್ಷೆ ಕೂಡ ಮಾಡಿರಲಿಲ್ಲ. ಬಹುಶಃ ಬೇರೆ ಕಡೆ ಕೊಡಬಹುದು ಅಂದುಕೊಂಡಿದ್ದೆ ಎಂದು ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ.
ಹಾಸನದ ಡಿಸಿ ಕಚೇರಿಯಲ್ಲಿ ಉಸ್ತುವಾರಿ ಸಚಿವರ ಕಚೇರಿ ಉದ್ಘಾಟನೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಶಿವಲಿಂಗೇಗೌಡ ಅವರು ಸಚಿವರಾಗಿದ್ರೆ ಅವರೇ ಉಸ್ತುವಾರಿ ಆಗೋರು. ಮುಂದೆ ಅವರೂ ಸಚಿವರು ಆಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಂಗಾರು ಬಿತ್ತನೆ ಹಿನ್ನೆಲೆಯಲ್ಲಿ ಕೈಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ಮಾಡುತ್ತೇನೆ. ನಮ್ಮ ಸರ್ಕಾರ ಅದಿಕಾರಕ್ಕೆ ಬಂದಿದೆ, ಎಲ್ಲರಿಗೂ ಅನುಕೂಲ ಆಗಬೇಕು. ಜಿಲ್ಲೆ ಅಭಿವೃದ್ಧಿ ಆಗಿದೆ. ಅದರ ಬಗ್ಗೆ ತಕರಾರು ಇಲ್ಲ. ಆದರೆ, ಕೆಲವು ಕಡೆ ಸಾಕಷ್ಟು ಕೆಲಸ ಆಗಬೇಕು. ನಾನು ಪಕ್ಷಾತೀತವಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ಸಿಗರು ನನ್ನ ಕೆಲಸದ ಪ್ರಚಾರ ಮಾಡಲಿಲ್ಲ : ಸಚಿವ ಹೆಚ್.ಸಿ ಮಹದೇವಪ್ಪ
ಅಕ್ಕಿ ಕೊಡ್ಲಿಲ್ಲ ಅಂದ್ರೆ ನಾವು ಸುಮ್ಮನೆ ಕೂರಲ್ಲ
ಧ್ವನಿ ಇಲ್ಲದವರಿಗೆ ಧ್ವನಿ ಆಗಬೇಕು ಎನ್ನುವುದು ನಮ್ಮ ಪಕ್ಷದ ಉದ್ದೇಶ. ಚುನಾವಣೆ ವರೆಗೆ ಮಾತ್ರ ಪಕ್ಷ, ಈಗ ಎಲ್ಲರು ಒಂದೇ. ಕೇಂದ್ರ ಸರ್ಕಾರದ ನೀತಿಯ ವಿರುದ್ಧ ನಾವು ಹೋರಾಟಕ್ಕೆ ಕರೆ ಕೊಟ್ಟಿದ್ದೇವೆ. ಪಡಿತರ ನೀಡಲು ಹಿಂದೇಟು ಹಾಕುತ್ತಿರೊ ಬಗ್ಗೆ ಹೋರಾಟ ಮಾಡುತ್ತೇವೆ. ಅವರು ಅಕ್ಕಿ ಕೊಡಲಿಲ್ಲ ಎಂದರೆ ನಾವು ಸುಮ್ಮನೆ ಕೂರಲ್ಲ. ಬೇರೆ ಹಲವು ರಾಜ್ಯಗಳಲ್ಲಿ ಅಕ್ಕಿ ಇದೆ, ಅಲ್ಲಿ ಖರೀದಿ ಮಾಡಿ ಜನರಿಗೆ ಕೊಡುತ್ತೇವೆ. ಕೇಂದ್ರ ಸರ್ಕಾರ ಚುನಾವಣಾ ಬಳಿಕ ಕರ್ನಾಟಕದ ಬಗ್ಗೆ ತಾರತಮ್ಯ ಮಾಡುತ್ತಿದೆ ಎಂದು ಬೇಸರ ಹೊರಹಾಕಿದ್ದಾರೆ.
ಮೋದಿ ಅನುಮತಿ ತಗೊಂಡು ಘೋಷಿಸಿದ್ರಾ?
ಸರ್ಕಾರ ಉಚಿತ ಅಕ್ಕಿ ಘೋಷಣೆ ವೇಳೆ ಎಫ್.ಸಿ.ಐ ಜೊತೆ ಚರ್ಚೆ ಮಾಡಿಲ್ಲ ಎಂಬ ವಿಚಾರ ಕುರಿತು ಮಾತನಾಡಿ, ಅವರ ಜೊತೆ ಚರ್ಚೆ ಮಾಡಿ ನಾವು ಘೋಷಣೆ ಮಾಡಬೇಕಿಲ್ಲ. ಅವರೇನು ಪುಕ್ಕಟ್ಟೆ ಕೊಡ್ತಾರಾ? ನಾವು ದುಡ್ಡು ಕೊಟ್ಟು ಖರೀದಿ ಮಾಡೋದು. ಪ್ರಧಾನಿ ನರೇಂದ್ರ ಮೋದಿಯವರು ಎಲ್ಲರ ಖಾತೆಗೆ 15 ಲಕ್ಷ ರೂ. ಹಣ ಹಾಕ್ತೀನಿ ಅಂತಾ ಹೇಳಿದ್ರಲ್ವಾ? ಅವರು ಅನುಮತಿ ತಗೊಂಡು ಘೋಷಣೆ ಮಾಡಿದ್ರಾ? ಎಂದು ಕೆ.ಎನ್ ರಾಜಣ್ಣ ಕಿಡಿಕಾರಿದ್ದಾರೆ.