ವಿಜಯಪುರ : 81ನೇ ವಯಸ್ಸಿನಲ್ಲಿ ಪರಿಕ್ಷೆ ಬರೆದ ವೃದ್ದ. ಪತಿಗೆ ಪತ್ನಿಯೇ ಪ್ರೇರಣೆ. ಅಜ್ಜನ ಉತ್ಸಾಹ ಕಂಡು ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳು ಗಾಬರಿ.
ಹೌದು, ಇಂಥದೊಂದು ಘಟನೆ ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ನರ್ಸಿಂಗ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.
81 ವರ್ಷದ ನಿಂಗಯ್ಯ ಒಡೆಯರ್ ಅವರೇ ಎಂ.ಎ ಇಂಗ್ಲಿಷ್ ನಲ್ಲಿ ಪರೀಕ್ಷೆ ಬರೆಯುತ್ತಿರುವ ಹಿರಿಯಜ್ಜ. ವಯಸ್ಸಾಗಿದ್ರೂ ಓದುವ ಹುಮ್ಮಸ್ಸು, ಪರೀಕ್ಷೆ ಬರೆಯುವ ಉತ್ಸಾಹ ನಿಂತಿಲ್ಲ. ಹಿರಿಯಜ್ಜನನಿಗೆ ಆತನ ಪತ್ನಿಯೇ ಪ್ರೇರಣೆಯಾಗಿದ್ದಾರೆ. ಪರೀಕ್ಷಾ ಕೇಂದ್ರಕ್ಕೆ ಪತ್ನಿ ಮಂಗಳಾದೇವಿ ಸಹಾಯದೊಂದಿಗೆ ಅಜ್ಜ ಆಗಮಿಸುತ್ತಾರೆ.
ನಿಂಗಯ್ಯ ಒಡೆಯರ್ ಮೂಲತಃ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗುಡೂರು ಎಸ್.ಸಿ ಗ್ರಾಮದವರು. ಆರೋಗ್ಯ ಇಲಾಖೆಯಲ್ಲಿ ಎಫ್ ಡಿಸಿ ಆಗಿ ವಯೋ ನಿವೃತ್ತಿ ಹೊಂದಿದ ಬಳಿಕ ನಿಂಗಯ್ಯ ಒಡೆಯರ್, ಮುಂದೆ ಏನು ಮಾಡೋದು ಅಂತಾ ಸ್ನಾತಕೋತ್ತರ ಪದವಿ ಮಾಡೋಕೆ ನಿರ್ಧರಿಸಿದ್ದರಂತೆ.
ಡಬಲ್ ಸ್ನಾತಕೋತ್ತರದ ಆಸೆ
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಹಿಂದಿ, ಇಂಗ್ಲಿಷ್, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಮುಗಿಸಿದ್ದಾರೆ. ಮತ್ತೆ ಇಗ್ನೋದಿಂದ ಕನ್ನಡ ಹಾಗೂ ಮತ್ತೆ ಇಂಗ್ಲಿಷ್ ನಲ್ಲಿ ಡಬಲ್ ಸ್ನಾತಕೋತ್ತರ ಮುಗಿಸಲು ನಿರ್ಧರಿಸಿದ್ದರು. ಇದೀಗ, ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ನರ್ಸಿಂಗ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ.
ಮೂರು ಪೇಪರ್ ಗಳ ಪರೀಕ್ಷೆ ಬಾಕಿ
ಮೊದಲು ಪರೀಕ್ಷೆ ಬರೆಯಲು ಆಗಮಿಸಿದಾಗ ನಿಂಗಯ್ಯ ಒಡೆಯರ್ ನೋಡಿ ಈ ವಯಸ್ಸಿನಲ್ಲೂ ಪರೀಕ್ಷೆ ಬರೆಯುತ್ತಿದ್ದಾರಾ? ಅಂತ ಇಗ್ನೋ ಸಂಯೋಜಕರಿಗೂ ಅಚ್ಚರಿಯಾಗಿತ್ತಂತೆ. ಈಗ ಮೂರು ಪೇಪರ್ ಪರೀಕ್ಷೆ ಮುಗಿದಿದ್ದು, ಇನ್ನೂ ಮೂರು ಪೇಪರ್ ಗಳ ಪರೀಕ್ಷೆ ಬಾಕಿ ಇದೆ ಎಂದು ಪ್ರೋಫೇಸರ್ ನಿಂಗನಗೌಡ ಪಾಟೀಲ ತಿಳಿಸಿದ್ದಾರೆ.
ಫಲಿತಾಂಶ ದೇವರಿಗೆ ಬಿಟ್ಟಿದ್ದು
ನಿಂಗಯ್ಯ ಒಡೆಯರ್ ಮಾತನಾಡಿ, ನಿತ್ಯ ಯೋಗಾಭ್ಯಾಸ ಜೊತೆಗೆ ಬೇಯಿಸದ ಆಹಾರ ಸೇವನೆಯೇ ನನ್ನ ಆರೋಗ್ಯ ಗುಟ್ಟು. ಬೆಳಗ್ಗೆ 4ಕ್ಕೆ ಎದ್ದು ಓದುತ್ತೇನೆ. ಈಗಾಗಲೇ ಐದಾರು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದೇನೆ. ಪರಿಸರ ಬಗ್ಗೆ ಕಾಳಜಿ ಹೊಂದಿದ್ದು, ಜಾಗೃತಿಯೂ ಮೂಡಿಸುತ್ತಿದ್ದೇನೆ. ಈಗ ಪರೀಕ್ಷೆ ಬರೆಯುತ್ತಿದ್ದೇನೆ. ಫಲಿತಾಂಶ ದೇವರಿಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.
ಒಟ್ಟಾರೆ, ಅದೆಷ್ಟೋ ವಿದ್ಯಾರ್ಥಿಗಳು ತಮ್ಮಿಂದ ಓದಲು ಆಗಲ್ಲ, ಸಾಧನೆ ಸಾಧ್ಯವಿಲ್ಲ ಅಂತ ವಿದ್ಯಾಭ್ಯಾಸ ಅರ್ಧಕ್ಕೆ ಮೊಟಕು ಗೊಳಿಸುತ್ತಾರೆ. ಅಂಥವರಿಗೆ 81ನೇ ವಯಸ್ಸಿನಲ್ಲಿ ಪರಿಕ್ಷೆ ಬರೆಯುತ್ತಿರುವ ನಿಂಗಯ್ಯ ಮಾದರಿಯೇ ಸರಿ.