Monday, November 18, 2024

ಐವರನ್ನ ಬಲಿ ಪಡೆದ ‘ಬಿಪರ್ ಜಾಯ್’, 30 ಸಾವಿರಕ್ಕೂ ಹೆಚ್ಚು ಜನ ಸ್ಥಳಾಂತರ

ನವದೆಹಲಿ : ನಾಳೆ ಗುಜರಾತ್​ಗೆ ಬಿಪರ್ ಜಾಯ್ ಚಂಡಮಾರುತ ಅಪ್ಪಳಿಸಲಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಮಂದಿಯನ್ನು ಆಶ್ರಯ ಸ್ಥಳಗಳತ್ತ ಶಿಫ್ಟ್ ಮಾಡಿದ್ರೂ, ಬಿಪರ್ ಜಾಯ್ ಚಂಡಮಾರುತ ಐವರನ್ನು ಬಲಿ ಪಡೆದಿದೆ. ಹೀಗಾಗಿ, ಗುಜರಾತ್​ನ ಕಚ್ ಮತ್ತು ಸೌರಾಷ್ಟ್ರ ಕರಾವಳಿ ತೀರದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಅರಬ್ಬಿ ಸಮುದ್ರದಲ್ಲಿ ಬಿಪರ್‌ ಜಾಯ್ ಚಂಡಮಾರುತವು ಕರಾವಳಿಯತ್ತ ಸುಮಾರು 150 ಕಿಮೀ ವೇಗವಾಗಿ ಚಲಿಸುತ್ತಿದೆ. ಇದರ ಪರಿಣಾಮ ಹಲವು ರಾಜ್ಯಗಳಲ್ಲಿ ಈಗಾಗಲೇ ಕಂಡು ಬರ್ತಿದೆ. ಕೇರಳ, ಕರ್ನಾಟಕ ಮತ್ತು ಗೋವಾ ಮೂಲಕ ಹಾದು ಹೋದ ನಂತರ ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಚಂಡಮಾರುತ ಆರ್ಭಟಿಸುತ್ತಿದೆ.

ಬಿಪರ್‌ ಜಾಯ್ ಚಂಡಮಾರುತ ಜೂನ್ 15ರ ಸಂಜೆ ಹೊತ್ತಿಗೆ ಸೌರಾಷ್ಟ್ರ ಮತ್ತು ಕಚ್ ತೀರಗಳನ್ನು ದಾಟುವ ನಿರೀಕ್ಷೆಯಿದೆ. ಹಾಗಾಗಿ, ಭಾರತೀಯ ಹವಾಮಾನ ಇಲಾಖೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಬಿಪರ್‌ಜಾಯ್ ಚಂಡಮಾರುತಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳು ತೆಗೆದುಕೊಳ್ಳಬಹುದಾದ ಕೆಲವು ಸಲಹೆಗಳನ್ನು ನೀಡಿದೆ.

ಇದನ್ನೂ ಓದಿ : ಕರ್ನಾಟಕ ಸೇರಿ 3 ರಾಜ್ಯಗಳಿಗೆ ಹೈ ಅಲರ್ಟ್ : 5 ದಿನ ಭಾರೀ ಮಳೆ ಸಾಧ್ಯತೆ

284 ಗರ್ಭಿಣಿಯರು ಶಿಫ್ಟ್

ಅಧಿಕಾರಿಗಳ ಸಲಹೆ ಮೇರೆಗೆ ಸೌರಾಷ್ಟ್ರ, ಕಚ್ ಜಿಲ್ಲೆಗಳಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಕಚ್ ನಲ್ಲಿ 14,088 ಜನರನ್ನು, ದ್ವಾರಕಾದಲ್ಲಿ 5,000, ರಾಜ್ ಕೋಟ್ ನಲ್ಲಿ 4,000, ಮೊರ್ಬಿಯಲ್ಲಿ 2,000, ಜಾಮ್ ನಗರದಲ್ಲಿ 1,500 ಜನರನ್ನು ಶಿಫ್ಟ್ ಮಾಡಲಾಗಿದ್ದು, ಇದರಲ್ಲಿ 284 ಗರ್ಭಿಣಿಯರು ಸೇರಿದ್ದಾರೆ. ಜನರ ರಕ್ಷಣಾ ಕಾರ್ಯಾಚರಣೆಗೆ ಎನ್​ಡಿಆರ್​ಎಫ್ ಹಾಗೂ ಎಸ್​ಡಿಆರ್​ಎಫ್ ತಂಡಗಳನ್ನು ನಿಯೋಜಿಸಲಾಗಿದೆ.

ಬಿರುಗಾಳಿ ಸಹಿತ ಭಾರಿ ಮಳೆ

ಹವಾಮಾನ ಇಲಾಖೆಯ ಮುನ್ನೆಚ್ಚರಿಕೆ ಕ್ರಮದ ನಡುವೆಯು ಬಿಪ‌ರ್ ಜಾಯ್ ಚಂಡಮಾರುತದ ಆರ್ಭಟಕ್ಕೆ ಗುಜರಾತ್ ಅಕ್ಷರಶಃ ನಲುಗಿದ್ದು, ಚಂಡಮಾರುತದಿಂದ ಆದ ಅನಾಹುತಕ್ಕೆ ಇದುವರೆಗೆ ಐವರು ಸಾವನ್ನಪ್ಪಿದ್ದಾರೆ. ಚಂಡಮಾರುತದಿಂದಾಗಿ ಅರಬ್ಬಿ ಸಮುದ್ರ ಗಜಗಾತ್ರದ ಅಲೆಗಳು ಏಳುತ್ತಿದ್ದು, ಬಿರುಗಾಳಿ ಸಹಿತ ಭಾರಿ ಮಳೆಯಾಗ್ತಿದೆ. ಅಲೆಗಳ ಹೊಡೆತಕ್ಕೆ ಸಮುದ್ರ ತೀರದ ಮನೆಗಳು ಕುಸಿದು ಬಿದ್ದಿವೆ. ಗುಜರಾತ್ ಕರಾವಳಿ ತೀರದಲ್ಲಿ ಬಿರುಗಾಳಿ, ಮಳೆಯಿಂದಾಗಿ ಈ ಐವರು ಸಾವನ್ನಪ್ಪಿದ್ದಾರೆ ಅಂತಾ ಹೇಳಲಾಗಿದೆ.

RELATED ARTICLES

Related Articles

TRENDING ARTICLES