ಬೆಂಗಳೂರು : ಬಿಪರ್‌ಜಾಯ್ ಚಂಡಮಾರುತ ತೀವ್ರತೆ ಪಡೆದುಕೊಂಡಿದ್ದು, ಜೂನ್ 15ರವರೆಗೆ ಈ ಚಂಡಮಾರುತದ ಅಬ್ಬರ ಇರಲಿದೆ. ಇದರ ಪರಿಣಾಮ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಕರಾವಳಿ ಭಾಗದಲ್ಲಿ ಗಾಳಿ ತೀವ್ರತೆ ಹೆಚ್ಚಿಸಿಕೊಂಡಿರುವ ಸೈಕ್ಲೋನ್ ಆ ಭಾಗದಲ್ಲಿ ಅಧಿಕ ಹಾನಿ ಉಂಟು ಮಾಡುವ ನಿರೀಕ್ಷೆ ಇದ್ದು, ಹೈ ಅಲರ್ಟ್ ಘೋಷಿಸಲಾಗಿದೆ.
ಇಂದಿನಿಂದ ರಾಜ್ಯದಾದ್ಯಂತ ಜೂನ್ 15ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಸೇರಿದಂತೆ ಕರಾವಳಿ ಭಾಗ ಸೇರಿ ಹಲವು ಭಾಗದಲ್ಲಿ ಮಳೆಯಾಗಲಿದೆ. ದಕ್ಷಿಣ ಒಳನಾಡು, ಕರಾವಳಿಯ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಇರಲಿದೆ. ಈ ಬಗ್ಗೆ ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಯೆಲ್ಲೋ ಅಲರ್ಟ್ ಘೋಷಿಸಿದೆ.
ರಾಜ್ಯದ ಕೆಲವೆಡೆ ಬಿರುಗಾಳಿ, ಗುಡುಗು ಮಿಂಚಿನ ಸಾಧ್ಯತೆ ಇರಲಿದೆ. ಗಾಳಿಯ ವೇಗವು ಗಂಟೆಗೆ 40 ರಿಂದ 50 ಕಿಲೋ ಮೀಟರ್ ವೇಗದಲ್ಲಿ ಸಾಗುವ ಸಾಧ್ಯತೆ ಇದೆ. ನಾಳೆ ಕೂಡ ಗಾಳಿ ಇದೇ ರೀತಿಯ ವೇಗದಲ್ಲಿ ಇರಲಿದೆ. ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40 ರಿಂದ 45 ಮೀಟರ್‌ನಿಂದ 55 ಕಿಲೋ ಮೀಟರ್ ವೇಗದಲ್ಲಿ ಬೀಸುವ ಸಾಧ್ಯತೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಜಿಲ್ಲೆಗಳಲ್ಲಿ ಭಾರೀ ಮಳೆ
ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದು ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ,ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.
ಇನ್ನೂ, ಗಬ್ಬೂರು, ಗೋಕರ್ಣ, ಅಂಕೋಲಾ, ಕುಂದಾಪುರ, ಕೋಟ, ಮಂಕಿ, ಭಾಲ್ಕಿ, ಮಂಗಳೂರು, ಸಿದ್ದಾಪುರ, ಕ್ಯಾಸಲ್ ರಾಕ್, ಕದ್ರಾ, ಪಣಂಬೂರು, ಮಂಗಳೂರು ವಿಮಾನ ನಿಲ್ದಾಣ, ಬೆಳ್ತಂಗಡಿ, ಯಲ್ಲಾಪುರ, ಕುಮಟಾ, ಶಿರಾಲಿ, ಉಪ್ಪಿನಂಗಡಿ, ಭಾಗಮಂಡಲ, ಶಿರಹಟ್ಟಿ, ಗಂಗಾವತಿ, ಚಿಂಚೋಳಿ, ಕುಕನೂರು, ಕಾರವಾರ, ಶಿಗ್ಗಾಂವ್, ಮುಂಡರಗಿ, ಧಾರವಾಡ, ಬರಗೂರು, ಕೊಟ್ಟಿಗೆಹಾರ, ಹುಂಚದಕಟ್ಟೆ, ವಿರಾಜಪೇಟೆಯಲ್ಲಿ ಮಳೆಯಾಗಿದೆ.