ಬೆಂಗಳೂರು : ಭಾರತ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ರೋಹಿತ್ ಪಡೆಯನ್ನು ಬಗ್ಗು ಬಡಿದು ಆಸ್ಟ್ರೇಲಿಯಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ.
10 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ಟೀಂ ಇಂಡಿಯಾ ಕನಸು ನುಚ್ಚುನೂರಾಗಿದೆ. ಓವಲ್ ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ನಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ 209 ರನ್ ಗಳ ಭರ್ಜರಿ ಗೆಲುವು ಸಾಧಿಸಿತು.
ಗೆಲ್ಲಲು 444 ರನ್ ಗಳ ಬಿಗ್ ಟಾರ್ಗೆಟ್ ಪಡೆದಿದ್ದ ರೋಹಿತ್ ಪಡೆ ಆಸಿಸ್ ವೇಗಿಗಳ ಮಾರಕ ದಾಳಿಗೆ ಪೆವಿಲಿಯನ್ ಪೆರೇಡ್ ನಡೆಸಿತು. ವಿರಾಟ್ ಕೊಹ್ಲಿ 49 ಹಾಗೂ ಅಜಿಂಕ್ಯ ರಹಾನೆ 46 ರನ್ ಸಿಡಿಸಿ ಉತ್ತಮ ಪ್ರದರ್ಶನ ನೀಡುವ ಸುಳಿವು ನೀಡಿದ್ದರೂ ಬೇಗನೆ ವಿಕೆಟ್ ಒಪ್ಪಿಸಿದರು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಟ್ರಾವಿಸ್ ಹೆಡ್ (163) ಹಾಗೂ ಸ್ಟೀವ್ ಸ್ಮಿತ್ (121) ಅವರ ಬೊಂಬಾಟ್ ಶತಕದ ನೆರವಿನಿಂದ ಮೊದಲ ಇನಿಂಗ್ಸ್ನಲ್ಲಿ 469 ರನ್ ಗಳಿಸಿತ್ತು.
Congratulations, Australia! 🇦🇺
A roaring victory in the ICC World Test Championship 2023 Final 🎉#WTC23 | #AUSvIND pic.twitter.com/VE01bWheMQ
— ICC (@ICC) June 11, 2023
ಸ್ಟಾರ್ ಬ್ಯಾಟರ್ ಗಳ ವೈಫಲ್ಯ
ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಪಡೆ ಆರಂಭದಿಂದಲೂ ಮುಗ್ಗರಿಸಿತು. ಆರಂಭಿಕರಾದ ನಾಯಕ ರೋಹಿತ್, ಶುಭಮನ್ ಗಿಲ್ ನಿರಾಸೆ ಮೂಡಿಸಿದರು. ಪೂಜಾರ, ವಿರಾಟ್ ಕೊಹ್ಲಿ, ಭರತ್ ಸಹ ವೈಫಲ್ಯ ಅನುಭವಿಸಿದರು. ಅಜಿಂಕ್ಯ ರಹಾನೆ (89), ಶಾರ್ದೂಲ್ ಠಾಕೂರ್ (51) ಅರ್ಧಶತಕ ಹಾಗೂ ಜಡೇಜಾ 48 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಬಳಿಕ, 296 ರನ್ಗಳಿಗೆ ಟೀಂ ಇಂಡಿಯಾ ಆಲ್ಔಟ್ ಆಯಿತು.
ಇತಿಹಾಸ ಸೃಷ್ಟಿಸಿದ ಆಸಿಸ್
ಬಳಿಕ, ಬ್ಯಾಟ್ ಬೀಸಿದ ಆಸಿಸ್ 8 ವಿಕೆಟ್ ನಷ್ಟಕ್ಕೆ 270 ರನ್ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಆಸ್ಟ್ರೇಲಿಯಾ ಪರ ಅಲೆಕ್ಸ್ ಕ್ಯಾರಿ ಅರ್ಧಶತಕ ಬಾರಿಸಿ ಮಿಂಚಿದ್ದರು. ಭಾರತದ ಗೆಲುವಿಗೆ ಆಸಿಸ್ 444 ರನ್ ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಭಾರತ 234 ರನ್ಗಳಿಗೆ ಆಲ್ಔಟ್ ಆಯಿತು. 209 ರನ್ಗಳ ಭರ್ಜರಿ ಗೆಲುವಿನೊಂದಿಗೆ ಆಸಿಸ್ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿತು. ಆ ಮೂಲಕ ಇತಿಹಾಸ ಸೃಷ್ಟಿಸಿತು.