ಬೆಂಗಳೂರು : ಮಕ್ಕಳು ತೆರಿಗೆ ಕಟ್ಟಿದ್ರೂ ತಾಯಿಗೆ 2000 ರೂ. ಸಹಾಯಧನವನ್ನು ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಗಂಡ ತೆರಿಗೆ ಕಟ್ಟೋದು ಮಾತ್ರ ಒಳಪಡುತ್ತೆ. ಮಕ್ಕಳು (ಮಗ)ತೆರಿಗೆ ಕಟ್ಟೋದು ಅನ್ವಯ ಆಗಲ್ಲ ಎಂದು ಹೇಳಿದ್ದಾರೆ.
ಗೃಹಲಕ್ಷ್ಮೀ ಫಾರ್ಮ್ ಓಡಾಡ್ತಿರೋದು ಅಸಲಿ. ಕೆಲವೊಂದು ಬದಲಾವಣೆ ಮಾಡಲಿದ್ದೇವೆ. ಬ್ಯಾಂಕ್ ಪಾಸ್ ಬುಕ್ ಸೇರಿಸಲಾಗುವುದು. ಜಾತಿ ಬದಲು ವರ್ಗ ಅಂತ ಹಾಕುತ್ತೇವೆ. ಸಂದೇಶ ತಪ್ಪಾಗಿ ಹೋಗಬಾರದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.
ಶೇ.90 ರಷ್ಟು ಬಿಪಿಎಲ್ ಕಾರ್ಡ್ ನಲ್ಲಿ ಮಹಿಳೆಯರೇ ಪ್ರಮುಖ ಅಗಲಿದ್ದಾರೆ. ಯಾರಿಗೆಲ್ಲಾ ಫಲ ಸಿಗಬೇಕು ಅವರನ್ನು ಸೇರಿಸಲಾಗುತ್ತದೆ. ಈಗ ಬಂದಿರೋ ಅರ್ಜಿ ಡ್ರಾಫ್ಟ್ ಮಾತ್ರ. ಕಾರ್ಯಕ್ರಮ ಬೆಳಗಾವಿಯಲ್ಲಿ ನಡೆಯಲಿದೆ. ಆಗಸ್ಟ್ 17 ಅಥವಾ 18ರಂದು ಸಮಾರಂಭ ಆಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಗ್ಯಾರಂಟಿಗಳು ಚೀಪ್ ಪಾಪ್ಯುಲಾರಿಟಿ : ಚಲುವರಾಯಸ್ವಾಮಿ ವಿಡಿಯೋ ವೈರಲ್
ಗೃಹಲಕ್ಷ್ಮಿ ಯೋಜನೆ ಯಾವಾಗ ಜಾರಿ?
ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟ ಸಭೆ ಬಳಿಕ ಹೇಳಿದ್ದರು. ಇದೀಗ, ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಆಗಸ್ಟ್ 17 ಅಥವಾ 18ರಂದು ಸಮಾರಂಭ ಎಂದು ಹೇಳಿದ್ದಾರೆ.
ಇನ್ನೂ ಜೂನ್ 15 ರಿಂದ ಜುಲೈ 15ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ರಾಜ್ಯದ ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ 2,000 ರೂ. ಸಹಾಯಧನವನ್ನು ನೀಡಲಾಗುವುದು. ಬಿಪಿಎಲ್, ಎಪಿಎಲ್ ಕುಟುಂಬದ ಮಹಿಳೆಯು ತಮ್ಮ ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ ನೊಂದಿಗೆ ಅರ್ಜಿ ಸಲ್ಲಿಸಬೇಕು. ತನ್ನನ್ನು ಮನೆಯ ಯಜಮಾನಿ ಎಂದು ಘೋಷಿಸಿಕೊಂಡವರಿಗೆ ಸಹಾಯಧನ ನೀಡಲಾಗುತ್ತದೆ.