ಬೆಂಗಳೂರು : ಜೀವ, ಪ್ರಾಣ ಕೊಡ್ತೀವಿ.. ಆದರೆ, ಮೀಸಲಾತಿ ಮುಟ್ಟಿದ್ರೆ ಸಹಿಸೋದಿಲ್ಲ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜಾತಿ ಜನಗಣತಿ ಆಧಾರದ ಮೇಲೆ ಮೀಸಲಾತಿ ನಿರ್ಣಯ ಬದಲಾವಣೆ ಮಾಡುವ ಸರ್ಕಾರದ ನಿರ್ಧಾರಕ್ಕೆ ಆಕ್ರೋಶ ಹೊರಹಾಕಿದ್ದಾರೆ.
ಜಾತಿ ಜನಗಣತಿ ಬಹಳ ಹಳೆಯದ್ದು. ಅವ್ರು (ಸಿದ್ದರಾಮಯ್ಯ) ಮುಖ್ಯಮಂತ್ರಿ ಆಗಿದ್ದಾಗಲೇ ಇದನ್ನು ಸ್ವೀಕಾರ ಮಾಡಲು ಒಪ್ಪಿರಲಿಲ್ಲ. ಅವರೇ ಸಿಎಂ ಆಗಿದ್ರು, ಅವರೇ ಯಾರನ್ನೋ ಚೇರ್ ಮೆನ್ ಕೂಡ ಮಾಡಿಕೊಂಡಿದ್ರು. ಅವರು ಕೊಟ್ಟ ವರದಿಯನ್ನೇ ಸ್ವೀಕಾರ ಮಾಡೋಕೆ ರೆಡಿ ಇರಲಿಲ್ಲ. ಇವತ್ತು ಜಾತಿ ಜನಗಣತಿ ಬಗ್ಗೆ ಮಾತಾಡಿದ್ರೆ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಮುಖ್ಯಮಂತ್ರಿಗಳು ಸರ್ವವನ್ನೂ ಬಲ್ಲವರು : ಹೆಚ್.ಡಿ ಕುಮಾರಸ್ವಾಮಿ
ಶಾಸಕರ ಮನೆಗೆ ನುಗ್ಗುವ ಕೆಲಸ ಆಗುತ್ತೆ
ಅಧಿಕಾರದಲ್ಲಿ ಇರುವಾಗ ಒಂದು ಮಾತು, ಅಧಿಕಾರದಲ್ಲಿ ಇಲ್ಲದೇ ಇರುವಾಗ ಒಂದು ಮಾತು. ಮೀಸಲಾತಿ ಮುಟ್ಟಿದ್ರೆ ಜನರು ಮುಂದೆ ಬೀದಿಗೆ ಇಳಿಯುತ್ತಾರೆ. ಶಾಸಕರ ಮನೆಗಳಿಗೆ ನುಗ್ಗುವಂತ ಕೆಲಸ ಕೂಡ ಆಗುತ್ತದೆ. ಎಂತಹ ಪರಿಸ್ಥಿತಿ ಆದರೂ ಸರೀಯೇ? ಜೀವ, ಪ್ರಾಣ ಬೇಕಿದ್ರೆ ಕೊಡ್ತೀವಿ ಸರಿ.. ಆದರೆ, ಮೀಸಲಾತಿ ಮುಟ್ಟೋರನ್ನು, ತೆಗೆಯೋರನ್ನಂತೂ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ಶ್ರೀರಾಮುಲು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಮೀಸಲಾತಿ ಗೊಂದಲ ನಿವಾರಣೆ : ಸಿಎಂ
ಬಿಜೆಪಿ ಸರ್ಕಾರವು ಮೀಸಲಾತಿಯಲ್ಲಿ ಸೃಷ್ಟಿಸಿದ ಗೊಂದಲ ನಿವಾರಣೆ ಮಾಡುತ್ತೇವೆ. ಮೀಸಲಾತಿ ಗೊಂದಲ ನಿವಾರಿಸುವುದು ನಮ್ಮ ಮೊದಲ ಆದ್ಯತೆ. ಇಲ್ಲವಾದರೆ ಯಾರಿಗೂ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಾಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ ಜಾತಿವಾರು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸಲಾಗಿತ್ತು. ಆ ವರದಿಯನ್ನು ಸ್ವೀಕರಿಸಿ, ಅದರ ದತ್ತಾಂಶದ ಆಧಾರದಲ್ಲಿ ವಿವಿಧ ಸಮುದಾಯಗಳಿಗೆ ಅನುಕೂಲ ಕಲ್ಪಿಸುತ್ತೇವೆ ಎಂದು ತಿಳಿಸಿದ್ದಾರೆ.