ಬೀದರ್ : ಗೋವುಗಳನ್ನು ಏಕೆ ಕಡಿಯಬಾರದು?ಎಂಬ ಹೇಳಿಕೆ ಹರಿಬಿಟ್ಟಿರುವ ಪಶುಸಂಗೋಪನಾ ಸಚಿವರ ವಿರುದ್ಧ ಮಾಜಿ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಕಿಡಿಕಾರಿದ್ದಾರೆ.
ಬೀದರ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹಾಲಿ ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಮೆಂಟಲ್ ಆಗಿದ್ದಾರೆ. ಕಾಂಗ್ರೆಸ್ ನವರು ಅಹಂಕಾರದಿಂದ ಅಧಿಕಾರ ನಡೆಸುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆದುಕೊಳ್ತೇವೆ ಅಂತಾ ಹೇಳ್ತಿದ್ದಾರೆ. ಗೋಹತ್ಯೆ ಕಾನೂನನ್ನು 1964ರಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿಯವರೇ ಜಾರಿ ಮಾಡಿದ್ದಾರೆ. ಆ ಕಾನುನನ್ನು ಪಶು ಸಂಗೋಪನಾ ಸಚಿವರು ಒಮ್ಮೆ ಒದಿಕೊಳ್ಳಲಿ. ಕಾನೂನಲ್ಲಿ ಹಸುಗಳನ್ನು ಕೊಲ್ಲಬಾರದು ಅಂತಾ ಕ್ಲಿಯರ್ ಆಗಿ ಹೇಳಿದ್ದಾರೆ. ಆದರೆ, ಈಗ ಎಮ್ಮೆ ಕೋಣ ಕೊಲ್ಲೊದಾದರೆ, ಹಸು ಕೊಲ್ಲಬಾರದಾ ಅಂತಾ ಹೇಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ : ಗೋವುಗಳನ್ನು ಏಕೆ ಕಡಿಯಬಾರದು? : ಸಚಿವರ ಹೇಳಿಕೆಗೆ ಬೊಮ್ಮಾಯಿ ಕಿಡಿ
ಹಿಂದೂ ಸಮಾಜವನ್ನು ವಿರೋಧ
ಕಾಂಗ್ರೆಸ್ ಸಚಿವರಿಗೆ ನಾಚಿಕೆ ಆಗಬೇಕು. ಕಾಂಗ್ರೆಸ್ ನವರೇ ಕಾನೂನು ಜಾರಿ ಮಾಡಿದ್ರು, ಈಗ ಈ ರೀತಿ ಯಾಕೆ ಹೇಳುತ್ತಿದ್ದಾರೆ ಗೊತ್ತಿಲ್ಲ. ಒಂದು ಸಮುದಾಯದ ಒಲೈಕೆಗಾಗಿ ಕಾಂಗ್ರೆಸ್ ನವರು ಹಿಂದೂ ಸಮಾಜವನ್ನು ವಿರೋಧ ಮಾಡುತ್ತಿದ್ದಾರೆ. ಕಾಂಗ್ರೆಸ್ ಘೋಷಿಸಿದ ಎಲ್ಲಾ ಗ್ಯಾರಂಟಿಗಳನ್ನು ಜನರಿಗೆ ತಲುಪಿಸಲಿ ಎಂದು ಪ್ರಭು ಚೌಹಾಣ್ ಛೇಡಿಸಿದ್ದಾರೆ.
ಸಚಿವ ವೆಂಕಟೇಶ್ ಜನರಿಗೆ ಕ್ಷಮೆ ಕೇಳಲಿ
ಪಶು ಸಂಗೋಪನಾ ಸಚಿವರು ರಾಜೀನಾಮೆ ನೀಡಬೇಕು. ರಾಜೀನಾಮೆ ನೀಡಲಿ ಅಥವಾ ಜನರಿಗೆ ಕ್ಷಮೆ ಕೇಳಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪಶು ಸಂಗೋಪನಾ ಖಾತೆ ಬದಲಾಯಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನ ಉಗ್ರ ಹೋರಾಟ ಮಾಡುತ್ತೇವೆ. ಗೋ ಹತ್ಯೆ ಕಾನೂನು ಮಾಡಿದ್ದು ಕಾಂಗ್ರೆಸ್ ಆದರೆ, ಅದನ್ನು ಬಲಪಡಿಸಿದ್ದು ಬಿಜೆಪಿ ಸರ್ಕಾರ. ಮುಸ್ಲಿಂ ಸಮುದಾಯವನ್ನು ಸಂತೋಷ ಪಡಿಸಲು ಕಾಂಗ್ರೆಸ್ ಈ ರೀತಿಯಲ್ಲಿ ಮಾಡುತ್ತಿದೆ ಎಂದು ಆರೋಪ ಮಾಡಿದ್ದಾರೆ.