ಬೆಂಗಳೂರು : ವಿಶ್ವ ಪರಿಸರ ದಿನ ಹಿನ್ನೆಲೆಯಲ್ಲಿ ಪರಿಸರ ಗೀತೆಗಳನ್ನು ಹಾಡುವ ಮೂಲಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪರಿಸರ ಜಾಗೃತಿ ಮೂಡಿಸಲಾಯಿತು.
ರಂಗ ಚಂದಿರ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆ ಹಾಗೂ ಅಂಕುರ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಬೆಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿ ಪರಿಸರ ಜಾಗೃತಿ ವಿನೂತನ ಅಭಿಯಾನ ನಡೆಯಿತು.
‘ವಿಶ್ವ ಪರಿಸರ ದಿನ’ವನ್ನು ಪರಿಸರ ಗೀತೆಗಳನ್ನು ಹಾಡುವ ಮೂಲಕ ಮತ್ತು ಬಿತ್ತಿ ಪತ್ರಗಳನ್ನು ಪ್ರದರ್ಶಿಸುವ ಮೂಲಕ ಪರಿಸರ ಉಳಿಸಿ ಪರಿಸರ ಬೆಳೆಸಿ, ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ ಎಂಬ ಘೋಷಣೆಗಳನ್ನು ಕೂಗುವ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದೆ ಹನುಮಕ್ಕ, ಮಂಜುನಾಥ್, ಜಿಪಿಓ ಚಂದ್ರು, ಕಲಾಪೋಷಕರಾದ ಮಾಗಡಿ ಗಿರೀಶ್, ರುದ್ರೇಶ್,ಶಿವಕುಮಾರ್, ಶಿವು ಸುರಪುರ, ಮುಂತಾದ ಕಲಾವಿದರು ಭಾಗವಹಿಸಿದರು.
ಇದನ್ನೂ ಓದಿ : ಸಾಲುಮರದ ತಿಮ್ಮಕ್ಕಗೆ ಸಂಪುಟ ದರ್ಜೆ ಸ್ಥಾನಮಾನ ಮುಂದುವರಿಸುವಂತೆ ಸಿಎಂ ಆದೇಶ
1974 ರಲ್ಲಿ ಪರಿಸರ ದಿನ ಆಚರಣೆ
1972 ರಲ್ಲಿ ವಿಶ್ವಸಂಸ್ಥೆಯ ಮಾನವ ಪರಿಸರದ ಸ್ಟಾಕ್ ಹೋಮ್ ಸಮ್ಮೇಳನದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸುವುದಾಗಿ ಘೋಷಣೆ ಮಾಡಲಾಗಿತ್ತು. ಬಳಿಕ, ಯುಎನ್ಇಪಿ ನೇತೃತ್ವದಲ್ಲಿ ಪ್ರತಿ ವರ್ಷ ಜೂನ್ 5ರಂದು ವಿಶ್ವ ಪರಿಸರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.
1974 ರಲ್ಲಿ ಮೊದಲ ಬಾರಿಗೆ ಯುನೈಟೆಡ್ ಸ್ಟೇಟ್ಸ್ ನಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಈ ದಿನವು ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮತ್ತು ಕೈಗೊಳ್ಳಬೇಕಾದ ಕ್ರಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಆರೋಗ್ಯಕರ ಜೀವನ ಮತ್ತು ಪ್ರಕೃತಿಯ ರಕ್ಷಣೆಯ ಬಗ್ಗೆ ಈ ದಿನ ನಮಗೆ ಅರಿವು ಮೂಡಿಸಲಿದೆ.