Monday, December 23, 2024

ಭಾಷಣದಲ್ಲಿ ‘ಭದ್ರಾ ನಿನಗೂ 200 ಯುನಿಟ್, ಶಿವಾ ನಿನಗೂ 200 ಯುನಿಟ್’ ಅಂದಿದ್ರು : ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ : ಕಾಂಗ್ರೆಸ್ ನಾಯಕರು ಭಾಷಣದಲ್ಲಿ ಭದ್ರಾ ನಿನಗೂ 200 ಯುನಿಟ್, ಶಿವಾ ನಿನಗೂ ಇನ್ನೂರು ಯುನಿಟ್ ಅಂದಿದ್ರು. ಈಗ ಏನು ಮಾಡಿದ್ದಾರೆ? ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನೆ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯ ಸರ್ಕಾರ ಹೇಳಿದ್ದೊಂದು ಮಾಡಿದ್ದೊಂದು. 200 ಯುನಿಟ್ ಯಾಕೆ ಮಾಡಿಲ್ಲಾ? ನನಗೆ ಉತ್ತರ ಕೊಡಿ ಎಂದು ಕಾಂಗ್ರೆಸ್ ನಾಯಕರಿಗೆ ಟಕ್ಕರ್ ಕೊಟ್ಟಿದ್ದಾರೆ.

ಚುನಾವಣಾ ಸಂದರ್ಭದಲ್ಲಿ ಭಾಷಣ ಮಾಡುವಾಗ ಭದ್ರಾ ನಿನಗೂ 200 ಯುನಿಟ್ ಫ್ರೀ.. ಶಿವಾ ನಿನಗೂ 200 ಯುನಿಟ್ ಫ್ರೀ.. ಅಂದಿದ್ರು. ಕಡಿಮೆ ವಿದ್ಯುತ್ ಬಳಸುವವರಿಗೆ ಏನು ಉಪಯೋಗ ಇಲ್ಲದಂತೆ ಮಾಡಿದ್ದಾರೆ. 200 ಯೂನಿಟ್ ಗಿಂತ ಹೆಚ್ಚು ಬಳಸುವವರ ಬಗ್ಗೆಯೂ ಸ್ಪಷ್ಟನೆ ಇಲ್ಲ. ಜನಕ್ಕೆ ಕಾಂಗ್ರೆಸ್ ಪಾರ್ಟಿ ಅವರು ಮೋಸ ಮಾಡಿದ್ದಾರೆ ಅನ್ನೋದು ಸ್ಪಷ್ಟವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಛೇಡಿಸಿದ್ದಾರೆ.

ಇದನ್ನೂ ಓದಿ : ‘ಗ್ಯಾರಂಟಿಯಲ್ಲಿ ದೋಖಾ’ ಮಾಡ್ತಿರೋದು ಸ್ಪಷ್ಟವಾಗಿ ಬೆಳಕಿಗೆ ಬಂದಿದೆ : ಬಸವರಾಜ ಬೊಮ್ಮಾಯಿ

ಪ್ರತ್ಯೇಕ 10 ಕಿಲೋ ಅಕ್ಕಿ ಕೊಡ್ತೀರಾ?

10 ಕಿಲೋ ಅಕ್ಕಿ ಉಚಿತ ಅಂತಾ ಭಾಷಣ ಮಾಡಿದವರು ನೀವು. 5 ಕಿಲೋ ಅಕ್ಕಿಯನ್ನು ಕೇಂದ್ರ ಸರ್ಕಾರ ಈಗಾಗಲೇ ಕೊಡುತ್ತಿದೆ, ಅದರ ಬಗ್ಗೆ ಏನು ಹೇಳ್ತೀರಿ? ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಉತ್ತರ ಕೊಡಬೇಕು, ಉಡಾಫೆ ಉತ್ತರ ನಡೆಯಲ್ಲ. ಕೇಂದ್ರ ಸರ್ಕಾರದ 5 ಕಿಲೋ ಜೊತೆಗೆ ಪ್ರತ್ಯೇಕ 10 ಕಿಲೋ ಅಕ್ಕಿ ಕೊಡ್ತೀರಾ? ಇಲ್ಲ ಕೇವಲ 5 ಕಿಲೋ ಕೊಡ್ತಾರಾ? ಉತ್ತರ ಕೊಡಲಿ ಎಂದು ಕುಟುಕಿದ್ದಾರೆ.

2023ರ‌ ಮೊದಲು ನಿರುದ್ಯೋಗಿಗಳಿಲ್ವಾ?

ಎಲ್ಲಾ ಪದವೀಧರ ಯುವಕರಿಗೆ 3,000 ರೂ. ನಿರುದ್ಯೋಗ ಭತ್ಯೆ ಅಂತ ಯುವನಿಧಿ ಬಗ್ಗೆ ಹೇಳಿದ್ದರು. ಈಗ 2023ರಲ್ಲಿ ಪಾಸಾದ ಪದವೀಧರರು, ಡಿಪ್ಲೊಮಾ ಹೋಲ್ಡರ್‌ಗಳಿಗೆ ಮಾತ್ರ ಅನ್ನುತ್ತಿದ್ದಾರೆ. 2023ರ‌ ಮೊದಲು ನಿರುದ್ಯೋಗಿಗಳಿಲ್ವಾ? ಇದನ್ನು ಮೊದಲೇ ಹೇಳಬೇಕಿತ್ತಲ್ವಾ? ಶುದ್ಧವಾದ ಮೋಸವನ್ನು ಕಾಂಗ್ರೆಸ್ ಪಾರ್ಟಿ ಮಾಡಿದೆ ಎಂದು ಟೀಕಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಬಗ್ಗೆ ಮೊದಲ ಕ್ಯಾಬಿನೇಟ್‌ನಲ್ಲಿ ಇನ್ ಪ್ರಿನ್ಸಿಫಲ್ ಅಪ್ರೂವಲ್ ಅಂತಾ ಮೊದಲು ನಾಟಕ ಮಾಡಿದ್ರು. ಈಗ ಅಪ್ಲಿಕೇಶನ್ ಹಾಕಲು ಹೇಳಿ ತಡ ಮಾಡುತ್ತಿದ್ದಾರೆ. ಬೇಕಂತಲೇ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES