ಹಾವೇರಿ : ಸಚಿವ ಸ್ಥಾನ ಸಿಗದಿದ್ದಕ್ಕೆ ನನಗೆ ಬಹಳ ಮುಜುಗರ ಆಗಿದೆ ಎಂದು ಶಾಸಕ ರುದ್ರಪ್ಪ ಲಮಾಣಿ ಅಸಮಾಧಾನ ಹೊರಹಾಕಿದ್ದಾರೆ.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕೊನೆಯ ಹಂತದಲ್ಲಿ ಮಂತ್ರಿಗಿರಿ ಕೈ ತಪ್ಪಿರುವ ಬಗ್ಗೆ ಬೇಸರಿಸಿದ್ದಾರೆ. ಬಂಜಾರ ಸಮುದಾಯದಿಂದ 5 ಜನರಿಗೆ ಟಿಕೆಟ್ ನೀಡಿದ್ದರು. ಅದರಲ್ಲಿ ನಾನು ಒಬ್ಬನೇ ಗೆದ್ದಿದ್ದೇನೆ ಎಂದಿದ್ದಾರೆ.
ಸಂವಿಧಾನದ ಪ್ರಕಾರ ಪ್ರಾತಿನಿಧ್ಯ ಕೊಡಲಾಗಿದೆ. ಹೀಗಾಗಿ, ರುದ್ರಪ್ಪ ಲಮಾಣಿಗೆ ಈ ಬಾರಿ ಸಚಿವ ಸ್ಥಾನ ಕೊಡಬೇಕು ಅಂತಾ ತಿರ್ಮಾನ ಮಾಡಿದ್ದರು. ಸಿಎಂ ಸಿದ್ದರಾಮಯ್ಯನವರೇ ಹೇಳಿದ್ದರು. ನಿಮಗೆನೇ ಸಪೋರ್ಟ್ ಮಾಡ್ತೇವಿ ಅಂತಾ. ಹೀಗಾಗಿ, ನಾನು ಆಯ್ಕೆ ಸುಲಭವಾಗಿದೆ ಅಂತಾ ಅಂದುಕೊಂಡಿದ್ದೆ. ಆದರೆ, ಈ ಬಾರಿ ನನಗೆ ಸಚಿವಸ್ಥಾನ ಸಿಗಬೇಕಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕುಣಿಗಲ್ ಶಾಸಕ ರಂಗನಾಥ್ ಅಕ್ರಮ ಮಾಡುವುದರಲ್ಲಿ ಎತ್ತಿದ ‘ಕೈ’ : ವಿಧಾನಪರಿಷತ್ ಸದಸ್ಯ ನವೀನ್
ಸಮಾಜದಲ್ಲಿ ಆಕ್ರೋಶ ಶುರುವಾಗಿದೆ
ತಾಂಡಾ ಬಚಾವ್ ಬಿಜೆಪಿ ಹಠಾವೊ ಎಂಬ ಸಂದೇಶದೊಂದಿಗೆ ನಾವು ಚುನಾವಣೆ ಮಾಡಿದ್ದೇವೆ. ಇಡೀ ನಮ್ಮ ಸಮುದಾಯ ಪಕ್ಷಕ್ಕೆ ಬೆಂಬಲ ಕೊಟ್ಟಿದೆ. ಮಂತ್ರಿಸ್ಥಾನ ಕೊಡದಿದ್ದಕ್ಕೆ ನಮಗೆ ಹಾಗೂ ಸಮಾಜದಲ್ಲಿ ಆಕ್ರೋಶ ಶುರುವಾಗಿದೆ. ಮುಂದಿನ ದಿನಗಳಲ್ಲಿ ಬದಲಾವಣೆ ಮಾಡುತ್ತೇವೆ ಎಂದಿದ್ದಾರೆ. ನನಗೆ ಸಿಎಂ ಹಾಗೂ ಡಿಸಿಎಂ ಕರೆದು ಮಾತಾಡಿದ್ದಾರೆ. ಅಲ್ಲಿಯವರೆಗೆ ನಮ್ಮ ಸಮಾಜದವರನ್ನು ಸಮಾಧಾನ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ.
ಹಾವೇರಿಗೆ ಅನ್ಯಾಯ ಆಗ್ತಿರೋದು ದುರದೃಷ್ಟಕರ
ಹೈಕಮಾಂಡ್ ಇದಕ್ಕೆ ಬೇಗನೆ ಇತಿಶ್ರೀ ಹಾಡಬೇಕು. ನಿಮಗೆ ನಿಗಮ ಮಂಡಳಿ ಕೊಡುತ್ತೇವೆ ಎಂದು ಸಿಎಂ ಹೇಳಿದ್ದಾರೆ. ಆದರೆ, ಸಮುದಾಯ ಇದನ್ನು ಒಪ್ಪಲು ತಯಾರಿಲ್ಲ. ಮಂತ್ರಿಸ್ಥಾನ ಸಿಗದಿದ್ದಕ್ಕೆ ನನಗೆ ಬಹಳ ಮುಜುಗರ ಆಗಿದೆ. ಕಾಂಗ್ರೆಸ್ ಸರ್ಕಾರ ಬಂದಾಗ ಹಾವೇರಿಗೆ ಅನ್ಯಾಯ ಆಗ್ತಾ ಇರೋದು ದುರದೃಷ್ಟಕರ. ಇನ್ನೊಬ್ಬರು ಗೆದ್ದು ಬಂದು ಇಲ್ಲಿ ಉಸ್ತುವಾರಿ ಆಗ್ತಾರೆ ಎಂದರೆ ಬೇಸರ ತರುತ್ತದೆ. ಈ ರೀತಿ ಆಗಬಾರದು, ನಮಗೆ ಸಚಿವಸ್ಥಾನ ಕೊಡಬೇಕಿತ್ತು. ನಾವು ಬೇಸರದಿಂದ ಯಾವ ಸಭೆಗೂ ಹೋಗಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.