ಬೆಂಗಳೂರು : ರಾಜ್ಯದ ಜೀವ ನದಿಯಾಗಿರುವ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ ಎಸ್(KRS) ಜಲಾಶಯದ ನೀರಿನ ಮಟ್ಟ 80 ಅಡಿಗೆ ಕುಸಿತ ಕಂಡಿದೆ. ಇದರಿಂದ ಬೆಂಗಳೂರಿನ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ.
ಹೌದು, ಉತ್ತಮ ಮಳೆಯಾದ ಹಿನ್ನಲೆ ಕಳೆದ ವರ್ಷ ಕೆಆರ್‌ಎಸ್ ಜಲಾಶಯ ಎರಡು ಬಾರಿ ಸಂಪೂರ್ಣ ಭರ್ತಿಯಾಗಿತ್ತು. ಪ್ರಸ್ತುತ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಬಾರದ ಹಿನ್ನಲೆ ನೀರಿನ ಮಟ್ಟ 80 ಅಡಿಗೆ ತಲುಪಿರುವುದು ಆತಂಕ ಮೂಡಿಸಿದೆ.
ಕಳೆದ 4 ವರ್ಷದ ಬಳಿಕ ಇದೇ ಮೊದಲ ಬಾರಿ ಕೆಆರ್ ಎಸ್ ಡ್ಯಾಂನ ನೀರಿನ ಮಟ್ಟ ಬೇಗನೆ 80 ಅಡಿಗೆ ಕುಸಿತ ಕಂಡಿದೆ. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್ ಡ್ಯಾಂನಲ್ಲಿ ಪ್ರಸ್ತುತ 80.78 ಅಡಿ ನೀರು ಮಾತ್ರ ಸಂಗ್ರಹವಾಗಿದೆ. ಸರಿಯಾದ ಪ್ರಮಾಣದಲ್ಲಿ ಮುಂಗಾರು ಬೀಳದಿದ್ರೆ ಕೆ.ಆರ್.ಎಸ್ ಡ್ಯಾಂ ಬರಿದಾಗುವ ಸಾಧ್ಯತೆಯಿದೆ.
49.452 ಟಿಎಂಸಿ ಕೆಆರ್‌ಎಸ್‌ನ ಗರಿಷ್ಠ ಸಾಂದ್ರತೆ. ಸದ್ಯ ಡ್ಯಾಂನಲ್ಲಿ 11.837 ಟಿಎಂಸಿಯಷ್ಟು ನೀರು ಮಾತ್ರ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಸಮಯಕ್ಕೆ 26.750 ಟಿಎಂಸಿ ನೀರಿತ್ತು. ಪ್ರಸ್ತುತ ಜಲಾಶಯಕ್ಕೆ 404 ಕ್ಯುಸೆಕ್ ನೀರು ಮಾತ್ರ ಹರಿದು ಬರುತ್ತಿದೆ. ಅಣೆಕಟ್ಟೆಯಿಂದ 3,113 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
ಇದನ್ನೂ ಓದಿ : ಇಂದಿನಿಂದ ಜೂನ್ 2ರವರೆಗೆ ಮಳೆಯಾಗುವ ಸಾಧ್ಯತೆ ; ರಾಜ್ಯದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
ಮುಳುಗಿದ್ದ ದೇಗುಲ ಗೋಚರ
ಕೆಆರ್ ಎಸ್ ಡ್ಯಾಂ ನೀರಿನ ಮಟ್ಟ 80 ಅಡಿಗೆ ಕುಸಿದ ಪರಿಣಾಮ ಮುಳಗಡೆಯಾಗಿದ್ದ ಶ್ರೀ ಲಕ್ಷ್ಮಿ ನಾರಾಯಣಸ್ವಾಮಿ ದೇಗುಲ ಗೋಚರವಾಗಿದೆ. ಶತಮಾನದಷ್ಟು ಹಳೆಯದಾದ ದೇವಾಲಯ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿತ್ತು. 5 ವರ್ಷದ ನಂತರ ಮತ್ತೆ ಗೋಚರವಾಗಿದೆ. ಸಾಮಾನ್ಯವಾಗಿ 85 ಅಡಿಗಿಂತ ಕಡಿಮೆ ಪ್ರಮಾಣದಲ್ಲಿ ನೀರಿನ ಕುಸಿತ ಕಂಡುಬಂದಲ್ಲಿ ಈ ದೇವಾಲಯ ಗೋಚರವಾಗುತ್ತದೆ. ಇನ್ನು ಗೋಚರವಾಗಿರುವ ದೇವಾಲಯದ ವಾಸ್ತು ಶಿಲ್ಪವನ್ನು ನೋಡಲು ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ.
ರೈತರಿಗೆ ಭಾರೀ ಆತಂಕ
ಕೆಆರ್ ಎಸ್ ಡ್ಯಾಂನಲ್ಲಿ ನೀರಿನ ಮಟ್ಟ 80 ಅಡಿಗೆ ಕುಸಿತ ಕಂಡಿದ್ದರೂ ಜೂನ್ ತಿಂಗಳವರೆಗೂ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಒಂದು ವೇಳೆ ಮುಂಗಾರು ಮಳೆ ಕೈಕೊಟ್ಟರೆ ಅಥವಾ ತಡವಾದರೆ ಕಾವೇರಿ ನೀರಿಗೆ ಅವಲಂಬಿತವಾಗಿರುವ ಜನರಿಗೆ ನೀರಿನ ಹಾಹಾಕಾರ ಎದುರಾಗುವ ಸಾಧ್ಯತೆಯಿದೆ. ಜೊತೆಗೆ, ಮುಂದಿನ ದಿನಗಳಲ್ಲಿ ಬೆಂಗಳೂರಿನ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಲಿದೆ. ಇನ್ನು ಜೂನ್ ತಿಂಗಳ ಅಂತ್ಯಕ್ಕೆ ಕೃಷಿಗೆ ನೀರು ಕೊಡುವುದು ಕಷ್ಟವಾಗಲಿದೆ. ನೀರಿನ ಸಮಸ್ಯೆಯಿಂದಾಗಿ ಡ್ಯಾಂನ ಅಚ್ಚುಕಟ್ಟು ಪ್ರದೇಶದ ರೈತರಿಗೆ ಭಾರೀ ಆತಂಕ ಎದುರಾಗಲಿದೆ.