Sunday, December 22, 2024

ಸುಳ್ಳನ್ನೇ ಸತ್ಯ ಮಾಡುವ ಕೆಲಸವನ್ನು ನಾವು ಮಾಡಲ್ಲ : ಸಚಿವ ಹೆಚ್.ಸಿ ಮಹದೇವಪ್ಪ

ಮೈಸೂರು : ಸುಳ್ಳನ್ನೇ ಸತ್ಯ ಮಾಡುವಂತಹ ಕೆಲಸವನ್ನು ನಾವು ಮಾಡಲ್ಲ. ನಾವೇನು ಮಾಡಿದ್ದೇವೆ ಅದನ್ನು ನಾವು ಹೇಳುತ್ತೇವೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾವು ರಾಜ್ಯದ ಜನರನ್ನು, ಸಮಾಜವನ್ನು ಕಟ್ಟುವ ಕೆಲಸ ಮಾಡಿದರೆ ಬಿಜೆಪಿಯವರು ಒಡೆಯುವ ಕೆಲಸ ಮಾಡುತ್ತಾರೆ. ಬಿಜೆಪಿಯವರು ಸೋತು ಹತಾಶರಾಗಿ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟು ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿತ್ತು. ಎಲ್ಲೆಡೆ ಭ್ರಷ್ಟಾಚಾರ ದುರಾಡಳಿತ ಇತ್ತು. ಇದರಿಂದ ಬೇಸತ್ತ ರಾಜ್ಯದ ಜನರು ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದ್ದು, ಜನರ ನಿರೀಕ್ಷೆಗಳನ್ನು ಉಳಿಸಿಕೊಳ್ಳುತ್ತೇವೆ. ನಮ್ಮ ಬದ್ಧತೆಯನ್ನು ಪ್ರಶ್ನೆ ಮಾಡುವ ನೈತಿಕತೆ ಬಿಜೆಪಿಯವರಿಗಿಲ್ಲ ಎಂದು ಸಚಿವ ಹೆಚ್.ಸಿ ಮಹದೇವಪ್ಪ ತಿರುಗೇಟು ಕೊಟ್ಟಿದ್ದಾರೆ.

ಇದನ್ನೂ ಓದಿ : ಸಿದ್ದರಾಮಯ್ಯ ಬಳಿ BPL ಕಾರ್ಡ್ ಇಲ್ಲ.. ಮಹದೇವಪ್ಪ ಬಳಿಯೂ ಇಲ್ಲ : ಸಿ.ಟಿ. ರವಿ

ಗ್ಯಾರಂಟಿ ಜಾರಿಗೆ ಕಾಲಾವಕಾಶ ಬೇಕು

2013ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದನಂತರ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ. ಈಗಲೂ ನಾವು ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ. ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕು. ಜುಲೈ ಒಳಗೆ ಮತ್ತೊಮ್ಮೆ ಬಜೆಟ್ ಮಂಡಿಸಿ ಅನುಮೋದನೆ ಪಡೆದುಕೊಳ್ಳಬೇಕು. ಗ್ಯಾರಂಟಿ ಯೋಜನೆ ಜಾರಿಗೆ ರೂಪು ರೇಷೆಗಳನ್ನು ಸಿದ್ದಪಡಿಸಬೇಕು. ಅಷ್ಟರಲ್ಲೇ ಅನುಷ್ಠಾನಗೊಳಿಸಿ ಎಂದು ಆತುರ ತೋರುತ್ತಿರುವ ಬಿಜೆಪಿ ನಾಯಕರ ನಿಲುವು ಸರಿಯಲ್ಲ ಎಂದು ಹೇಳಿದ್ದಾರೆ.

18 ಕೋಟಿ ಉದ್ಯೋಗ ಕೊಟ್ಟಿದ್ದಾರಾ?

ಬಿಜೆಪಿಯವರು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುವ ಭರವಸೆ ನೀಡಿದ್ದರು. ವಿದೇಶದಲ್ಲಿರುವ ಕಪ್ಪುಹಣ ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೂ 15 ಲಕ್ಷ ಹಣ ಹಾಕುತ್ತೇವೆ ಎಂದಿದ್ದರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 9 ವರ್ಷವಾಯಿತು. ಹಾಗಾದರೆ 18 ಕೋಟಿ ಉದ್ಯೋಗ ಕೊಟ್ಟಿದ್ದಾರಾ? ಎಷ್ಟು ಜನರ ಖಾತೆಗೆ 15 ಲಕ್ಷ ಹಣ ಹಾಕಿದ್ದಾರೆ? ವಿದೇಶದಿಂದ ಎಷ್ಟು ಕಪ್ಪು ಹಣ ತಂದಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಯವರು ಸೋಲಿನ ಹತಾಶೆಯಿಂದ ಹೇಳಿಕೆಗಳನ್ನು ‌ನೀಡುತ್ತಿದ್ದಾರೆ. ಕೈಲಾಗದವನು ಮೈ ಪರಚಿಕೊಂಡಂತೆ ಬಿಜೆಪಿ ನಾಯಕರು ವರ್ತಿಸುತ್ತಿದ್ದಾರೆ ಎಂದು ಸಚಿವ ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES