ಬೆಂಗಳೂರು : ಸಚಿವ ಸತೀಶ್ ಜಾರಕಿಹೊಳಿಯವರಿಗೆ ಸಿಎಂ ಆಗುವ ಸಾಮರ್ಥ್ಯ ಇದೆ. ಅವರು ಮುಂದೆ ಸಿಎಂ ಆಗಿಯೇ ಆಗುತ್ತಾರೆ ಎಂದು ನೂತನ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿಯವರಿಗೆ ಡಿಸಿಎಂ ಸ್ಥಾನ ಕೈತಪ್ಪಿದ್ದರ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಈ ವೇಳೆ ಸತೀಶ್ ಅವರಿಗೆ ಡಿಸಿಎಂ ಅಲ್ಲ, ರಾಜ್ಯದ ಮುಖ್ಯಮಂತ್ರಿಯಾಗುವ ಸಾಮರ್ಥ್ಯವಿದೆ. ಮುಂದೆ ಖಂಡಿತಾ ಸಿಎಂ ಆಗುತ್ತಾರೆ ಎಂದಿದ್ದಾರೆ.
ಇನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಈ ಹಿಂದೆ ನಡೆದ ಭ್ರಷ್ಟಾಚಾರದ ತನಿಖೆ ನಡೆಸುತ್ತಿರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇನ್ನೂ ಸಚಿವರಿಗೆ ಅಧಿಕೃತವಾಗಿ ಇಲಾಖೆಗಳ ಹಂಚಿಕೆ ಆಗಿಲ್ಲ. ನಾನು ಸಚಿವೆ ಆಗಿ ಪ್ರಮಾಣವಚನ ಸ್ವೀಕರಿಸಿ ಇನ್ನೂ 24 ಗಂಟೆಯಾಗಿಲ್ಲ. ರಾಜ್ಯದ ಜನರು, ಮುಖ್ಯಮಂತ್ರಿ ಹಾಗೂ ಡಿಸಿಎಂ ಮೆಚ್ಚುವಂತಹ ಆಡಳಿತ ನೀಡುತ್ತೇನೆ. ಯಾವುದೇ ಇಲಾಖೆ ನೀಡಿದರೂ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ರಾಜೀನಾಮೆ ಕೊಡಲು ನಾನು ಬಾಡಿಗೆ ಮನೆಯಿಂದ ಬಂದವನಲ್ಲ : ಬಿ.ಕೆ ಹರಿಪ್ರಸಾದ್
ಸಚಿವ ಸ್ಥಾನ ಕೈತಪ್ಪಿದವರಿಗೆ ಬೇರೆ ಹುದ್ದೆ
ಸಚಿವ ಸ್ಥಾನ ಸಿಗಲಿಲ್ಲವೆಂದು ಬೇಸರಿಸಬೇಕಾದ ಅಗತ್ಯವಿಲ್ಲ. ಸಚಿವ ಸ್ಥಾನ ಸಿಗದ ಅರ್ಹರಿಗೆ ಬೇರೆ ಹುದ್ದೆ ನೀಡಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಈ ಬಾರಿ ಗೆದ್ದ ಶಾಸಕರ ಪೈಕಿ ಅನೇಕರು ಕನಿಷ್ಠ ಎರಡು ಅಥವಾ ಮೂರು ಬಾರಿ ಗೆದ್ದವರೇ ಇದ್ದಾರೆ. ಬೆಳಗಾವಿ ಜಿಲ್ಲೆ ಮತ್ತು ಬೇರೆ ಕಡೆಯೂ ಕೆಲವರಿಗೆ ಸಚಿವ ಸ್ಥಾನ ಕೊಡಲು ಆಗಿಲ್ಲ. ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಅಸಮಾಧಾನ ಎಲ್ಲ ಕಡೆ ಇದೆ ಇಲ್ಲ ಅಂತ ಹೇಳಲು ಬರುವುದಿಲ್ಲ. ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಆರೋಪ ಮಾಡುವುದು ಸ್ವಾಭಾವಿಕ ಮತ್ತು ಸಹಜ. ಅಂಥವರಿಗೆ ಬೇರೆ ಬೇರೆ ಹುದ್ದೆ ಕೊಡುತ್ತೇವೆ ಎಂದು ತಿಳಿಸಿದ್ದಾರೆ.