ಬೆಂಗಳೂರು : ಸಿಎಂ ಸಿದ್ದರಾಮಯ್ಯ ನೇತೃತ್ವದ ಸಂಪುಟದಲ್ಲಿ ಕಾಂಗ್ರೆಸ್ ಘಟಾನುಘಟಿಗಳಿಗೆ ಮಂತ್ರಿಗಿರಿ ಕೈತಪ್ಪಿದ್ದು, ಹಲವರು ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಕೆಲವು ಕಾಂಗ್ರೆಸ್ ನಾಯಕರು ಅಸಮಾಧಾನಗೊಂಡಿದ್ದಾರೆ. ಆದರೆ, ಇದಕ್ಕೆ ನಾನೇನು ಮಾಡಲು ಸಾಧ್ಯ ಎಂದು ಹೇಳಿದ್ದಾರೆ.
ನಾನೂ ಕೂಡ ಸಾಕಷ್ಟು ಬಾರಿ ಅವಕಾಶದಿಂದ ವಂಚಿತನಾಗಿದ್ದೆ. ಧರಂಸಿಂಗ್, ಸಿದ್ದರಾಮಯ್ಯ ಅವರ ಸಂಪುಟದಲ್ಲಿ ನನಗೂ ಅವಕಾಶ ಸಿಕ್ಕಿರಲಿಲ್ಲ. ಆದರೆ, ನಾನು ತಾಳ್ಮೆಯಿಂದ ಕಾದಿದ್ದೆ. ಸಚಿವ ಸ್ಥಾನ ಸಿಗದ್ದಕ್ಕೆ ಅಸಮಾಧಾನ ಮಾಡಿಕೊಂಡರೆ ನಾನು ಏನು ಮಾಡಲು ಆಗುತ್ತೆ? ಮಾತನಾಡುವವರು ಮಾತನಾಡಲಿ. ನಾನೇನು ಮಾತನಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಸಿದ್ದು ಸಂಪುಟದಲ್ಲಿ ಹಲವರಿಗೆ ಸಚಿವಸ್ಥಾನ ಮಿಸ್
ಡಿಕೆಶಿ ಆಪ್ತರಿಗೆ ಉನ್ನತ ಖಾತೆ
ಡಿಸಿಎಂ ಡಿ.ಕೆ ಶಿವಕುಮಾರ್ ತಮ್ಮ ಆಪ್ತರಿಗೆ ಸಚಿವ ಸ್ಥಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದು, ಸಚಿವರಿಗೆ ಉನ್ನತ ಖಾತೆಗಳನ್ನು ನೀಡಲಾಗಿದೆ. ಡಾ.ಜಿ.ಪರಮೇಶ್ವರ್ರವ ಗೃಹ ಖಾತೆ ನೀಡಲಾಗಿದೆ. ರಾಮಲಿಂಗಾರೆಡ್ಡಿಗೆ ಸಾರಿಗೆ ಇಲಾಖೆ, ಪ್ರಿಯಾಂಕ್ ಖರ್ಗೆಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಚಲುವರಾಯಸ್ವಾಮಿಗೆ ಕೃಷಿ, ಶರಣಬಸಪ್ಪ ದರ್ಶನಾಪುರ್ ಗೆ ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ನೀಡಲಾಗಿದೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ನೀಡಲಾಗಿದೆ. ಇನ್ನು ಮಧು ಬಂಗಾರಪ್ಪಗೆ ಶಿಕ್ಷಣ ಖಾತೆ, ಮಂಕಾಳು ವೈದ್ಯರಿಗೆ ಮೀನುಗಾರಿಕೆ ಮತ್ತು ಬಂದರು, ಒಳನಾಡು ಜಲಸಾರಿಗೆ ಖಾತೆ ಒಲಿದಿದೆ.