ಬೆಂಗಳೂರು : ಜೂನ್ 1ರಿಂದ 200 ಯೂನಿಟ್ ಒಳಗೆ ವಿದ್ಯುತ್ ಬಿಲ್ ಬಂದರೆ ಬಿಲ್ ಕಟ್ಟಬೇಡಿ. 200 ಯೂನಿಟ್ ಮೇಲೆ ಎಷ್ಟು ಹೆಚ್ಚುವರಿ ಬಳಸುತ್ತೀರೋ ಅದಕ್ಕೆ ಮಾತ್ರ ಬಿಲ್ ಕಟ್ಟಿ ಎಂದು ಸಂಸದ ಪ್ರತಾಪ್ ಸಿಂಹ ರಾಜ್ಯದ ಜನತೆಗೆ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮುಖ ನೋಡಿ ಯಾರೂ ಮತ ಹಾಕಿಲ್ಲ. ಕಾಂಗ್ರೆಸ್ ಘೋಷಿಸಿದ್ದ ಉಚಿತ ಗ್ಯಾರಂಟಿ ಕಾರ್ಡ್ ನೋಡಿ ಮತ ಹಾಕಿದ್ದಾರೆ, ಅದು ನೆನಪಿರಲಿ ಎಂದು ಕುಟುಕಿದ್ದಾರೆ.
ಜೂನ್ 1ರಿಂದ ಹೋರಾಟ ಮಾಡುತ್ತೇವೆ
ರಾಜಸ್ಥಾನದಲ್ಲಿ ಕಾಂಗ್ರೆಸ್ ಇದೇ ರೀತಿ ಭರವಸೆ ನೀಡಲಾಗಿತ್ತು. ಇಲ್ಲಿಯವರೆಗೆ ಇದು ಜಾರಿಯಾಗಿಲ್ಲ. ನಾವು ಸೋತಿದ್ದೇವೆ, ಸತ್ತಿಲ್ಲ. ಕೊಟ್ಟ ಭರವಸೆ ಈಡೇರಿಸಿ. ಜೂನ್ 1ರವರೆಗೆ ಕಾಯುತ್ತೇನೆ. ಗ್ಯಾರಂಟಿಗಳಿಗೆ ಷರತ್ತು ಹಾಕಿದರೆ, ಜೂನ್ 1ರಿಂದ ಹೋರಾಟ ಮಾಡುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಅಶ್ವತ್ಥನಾರಾಯಣ ವಿರುದ್ಧ ಮೈಸೂರಿನಲ್ಲಿ FIR ದಾಖಲು
ಬಿಜೆಪಿ ಕಾರ್ಯಕರ್ತರು ಅಪಾಯದಲ್ಲಿದ್ದಾರೆ
ಸರ್ಕಾರ ಯಾರದ್ದೆ ಇರಬಹುದು ನಾನು ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ನಡೆಯುವುದಕ್ಕೆ ಬಿಡಲ್ಲ. ನಾನು ಅಂತರಾಳದಿಂದಲೇ ನಮ್ಮ ಕಾರ್ಯಕರ್ತರ ಕ್ಷಮೆ ಕೇಳಿದ್ದೇನೆ. ನಮ್ಮ ಕಾರ್ಯಕರ್ತರ ಟಾರ್ಗೆಟ್ ನಿಧಾನವಾಗಿ ಶುರುವಾಗಿದೆ. ಬಿಜೆಪಿ ಕಾರ್ಯಕರ್ತರು ಅಪಾಯದಲ್ಲಿದ್ದಾರೆ ಎಂದು ಹೇಳಿದ್ದಾರೆ.
ನಮ್ಮ ಕಾರ್ಯಕರ್ತರ ಅಪಾಯಕ್ಕೆ ತಳ್ಳಿದ್ದಕ್ಕೆ ನಾನು ಕ್ಷಮೆ ಕೇಳಿದ್ದೇನೆ. ನಮ್ಮ ಕಾರ್ಯಕರ್ತರು ನಿಜವಾಗಿಯೂ ನೊಂದಿದ್ದಾರೆ. ದೇಶ, ಧರ್ಮ ಅಂತಾ ನಮ್ಮ ಕಾರ್ಯಕರ್ತರು ದುಡಿಯುತ್ತಾರೆ. ನಮ್ಮಲ್ಲಿ ಗುತ್ತಿಗೆದಾರಿಕೆ ಮಾಡುವ ಕಾರ್ಯಕರ್ತರೆ ಕಡಿಮೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.