ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಬರುತ್ತಿದ್ದಂತೆ ಒಂದೆಡೆ ವಿದ್ಯುತ್ ಬಿಲ್ ಪಾವತಿಗೆ ಹಿಂದೇಟು ಹಾಕಿ ಕೆಪಿಟಿಸಿಲ್ ಸಿಬ್ಬಂದಿ ಜೊತೆಗೆ ಜನ ಜಗಳವಾಡುತ್ತಿದ್ದಾರೆ. ಇತ್ತ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವಂತೆ ಮಹಿಳೆಯರು ಸಹ ಬಸ್ ನಿರ್ವಾಹಕರ ಮೇಲೆ ಒತ್ತಡ ಹೇರುತ್ತಿದ್ದಾರೆ.
ಹೌದು,ರಾಜ್ಯದಲ್ಲಿ ಗ್ಯಾರಂಟಿಗಳು ಜಾರಿಗೆ ಇನ್ನೂ ಬಂದಿಲ್ಲ ಎಂದು ರೋಸಿ ಹೋಗಿ ಸಿಬ್ಬಂದಿಗಳ ಮೇಲೆ ಜಗಳಕ್ಕೆ ಹೋಗುತ್ತಿದ್ದಾರೆ. ಇನ್ನೂ ಮಹಿಳೆಯರಿಗೆ ಉಚಿತ ಪ್ರಯಾಣ ಗ್ಯಾರೆಂಟಿ ವಿಚಾರವಾಗಿ ಇದೀಗ KSRTC ಸಂಸ್ಥೆಯ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯ್ ಭಾಸ್ಕರ್, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.
ರಾಜ್ಯದ ವಿವಿಧ ಮಾರ್ಗಗಳಲ್ಲಿ ನಿತ್ಯವು ಮಹಿಳಾ ಪ್ರಯಾಣಿಕರು ಹಣ ಕೊಡದೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಬೇಕೆಂದು ನಿರ್ವಾಹಕರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ಬಸ್ಸು ಪ್ರಯಾಣದ ಸಂದರ್ಭದಲ್ಲಿ ಸಿಬ್ಬಂದಿಗಳು ಹಾಗೂ ಪ್ರಯಾಣಿಕರ ಮಧ್ಯೆ ವಾಗ್ವಾದ ನಡೆಯುತ್ತಿದೆ. ಇದರಿಂದಾಗಿ ಟಿಕೆಟ್ ಹಣ ಪಡೆಯುವುದೇ ಹರಸಾಹಸವಾಗಿದೆ.
ಹೀಗಾಗಿ ಶೀಘ್ರದಲ್ಲೇ ಸರ್ಕಾರ ಯೋಜನೆ ಜಾರಿಗೆ ತರಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದ್ದು ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಬೇಕು ಎಂದು ಸಿಎಂಗೆ ಸಾರಿಗೆ ಯೂನಿಯನ್ ಪ್ರಧಾನ ಕಾರ್ಯದರ್ಶಿ ವಿಜಯ್ ಭಾಸ್ಕರ್ ಪತ್ರ ಬರೆದಿದ್ದಾರೆ.