ಬೆಂಗಳೂರು : ಖಾಸಗಿ ಜೀವನದಲ್ಲಿ ಅವರ (ಪೊಲೀಸರ) ಉಡುಪುಗಳ ಬಗ್ಗೆ ಪ್ರಶ್ನೆ ಮಾಡಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ದ್ವೇಷ ತೀರಿಸಿಕೊಂಡಿದ್ದಾರೆ ಎಂದು ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕುಟುಕಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಡಿಕೆಶಿ ಪೊಲೀಸರಿಗೆ ನಿನ್ನೆ ಕೇಸರಿ ಶಾಲಿನ ಆರೋಪ ಮಾಡಿದ್ದಾರೆ. ಅಧಿಕಾರಿಗಳ ಮೇಲೆ ಹರಿಹಾಯ್ದು ಎಚ್ಚರಿಕೆ ಕೊಟ್ಟಿರೋದು ಕಂಡುಬಂದಿದೆ ಎಂದು ಹೇಳಿದ್ದಾರೆ.
ಕೇಸರಿ ಶಾಲು ಈ ರಾಜ್ಯದಲ್ಲಿ ನಿಷೇಧ ಇಲ್ಲ. ಕರ್ತವ್ಯದಲ್ಲಿದ್ದಾಗ ಯಾರೂ ಕೇಸರಿ ಪ್ರಯೋಗ ಮಾಡಿಲ್ಲ. ಅವರ ಖಾಸಗಿ ಜೀವನದಲ್ಲಿ ಅವರ ಉಡುಪುಗಳ ಬಗ್ಗೆ ಪ್ರಶ್ನೆ ಮಾಡಿ ಡಿಕೆಶಿ ದ್ವೇಷ ತೀರಿಸಿಕೊಂಡಿದ್ದಾರೆ. ಇದು ಸರಿಯಲ್ಲ, ಅವರು ತಮ್ಮ ಮಾತನ್ನು ಪುನರ್ ಪರಿಶೀಲನೆ ಮಾಡಬೇಕು ಎಂದು ಮಾಜಿ ಸಚಿವ ಕೋಟಾ ತಿಳಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರಲ್ಲ
ಚಿತ್ರದುರ್ಗ ಜಿಲ್ಲೆಯ ಶಿಕ್ಷಕರು ಮುಖ್ಯಮಂತ್ರಿಗಳ ಸಾಲದ ಬಗ್ಗೆ ಮಾತನಾಡಿದ್ದಕ್ಕೆ ಅಮಾನತು ಮಾಡಲಾಗಿದೆ. ಡಿಕೆಶಿ ಮತ್ತು ಸಿದ್ದರಾಮಯ್ಯ ಸರ್ಕಾರದಲ್ಲಿ ದ್ವೇಷ ಸಾಧಿಸೋ ವಾತಾವರಣ ಕಂಡುಬರುತ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರಲ್ಲ, ಅದನ್ನು ಪುನರ್ ಪರಿಶೀಲಿಸಲಿ ಎಂದು ನಯವಾಗಿಯೇ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ : ‘ಪೊಲೀಸ್ ಇಲಾಖೆಯನ್ನು ಕೇಸರಿಕರಣ’ ಮಾಡಲು ಹೊರಟಿದ್ದೀರಾ? : ಡಿಕೆಶಿ ಫುಲ್ ಗರಂ
ನನ್ನಿಂದಲೇ ತನಿಖೆ ಪ್ರಾರಂಭವಾಗಲಿ
ಸಿದ್ದರಾಮಯ್ಯ ಮತ್ತು ಡಿಕೆಶಿ 40% ಕಮಿಷನ್ ತನಿಖೆ ಮಾಡ್ತೀವಿ ಅಂದಿದ್ದಾರೆ. ಈ ತನಿಖೆಯನ್ನು ಮುಕ್ತವಾಗಿ ನಾನು ಸ್ವಾಗತ ಮಾಡ್ತೇನೆ. ಸಮಾಜ ಕಲ್ಯಾಣ, ಹಿಂದುಳಿದ ಇಲಾಖೆ ಮಂತ್ರಿಯಾಗಿದ್ದ ನನ್ನಿಂದಲೇ ತನಿಖೆ ಪ್ರಾರಂಭವಾಗಲಿ. ಇಡೀ ತನಿಖೆ ಮಾಡಲಿ, ಯಾವ ತನಿಖೆಯಲ್ಲಿ ಏನಾಗುತ್ತೆ ನೋಡೋಣ. ವ್ಯಕ್ತಿಗತ ದ್ವೇಷಕ್ಕೆ ಅವಕಾಶ ಕೊಡಬಾರದು. ಆದರೂ. ತನಿಖೆ ಮಾಡಲಿ ಎಂದು ಸವಾಲೆಸೆದಿದ್ದಾರೆ.
ಹಿಂದುತ್ವ, ಹಿಂದುಗಳಿಗೆ ಕಠಿಣ ದಿನ
ಸಾಮಾನ್ಯವಾಗಿ ಹಿಂದುತ್ವದ ವಿಚಾರ ಇಟ್ಟುಕೊಂಡು ಅವರ ಗುರಿ ಇದೆ ಅನ್ನೋದು ನಮಗೆ ಅರ್ಥವಾಗಿದೆ. ಮುಂದಿನ ದಿನಗಳು ಹಿಂದುತ್ವ ಮತ್ತು ಹಿಂದುಗಳಿಗೆ ಕಠಿಣ ದಿನವಾಗಲಿದೆ. ಯಾರನ್ನಾದರೂ ಓಲೈಕೆ ಮಾಡಲು ಹಿಂದುತ್ವದ ಚಟುವಟಿಕೆಗಳನ್ನು ನಿಷೇಧ ಮಾಡೋದಾಗಲಿ, ನೈತಿಕ ಪೊಲೀಸ್ ಗಿರಿ ಆರೋಪ ಮಾಡಿ ಬಂಧಿಸುವ ಕೆಲಸ ಮುಂದೆ ಆಗುತ್ತೆ ಅಂತ ನಮಗೆ ಅನಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಗೋಹತ್ಯೆ ಕಾಯ್ದೆ, ಮತಾಂತರ ಕಾಯ್ದೆ ವಿರೋಧಿಸುವ ಕಾರ್ಯತಂತ್ರ ರೂಪುಗೊಂಡಿದೆ. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷವಾಗಿ ನಾವು ಜನಸಾಮಾನ್ಯರಿಗೆ ರಕ್ಷಣೆ ಕೊಡ್ತೇವೆ ಎಂದು ಹೇಳಿದ್ದಾರೆ.