Thursday, December 19, 2024

ಕೇಂದ್ರದ ತಾರತಮ್ಯ ನೀತಿಯಿಂದ ರಾಜ್ಯಕ್ಕೆ ಅಪಾರ ನಷ್ಟವಾಗಿದೆ : ಸಿದ್ದರಾಮಯ್ಯ

ಬೆಂಗಳೂರು : ಕೇಂದ್ರದ ತಾರತಮ್ಯ ನೀತಿಯಿಂದ ರಾಜ್ಯದ ಜನತೆಗೆ ಅಪಾರ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಕೇಂದ್ರದ ಕಡೆ ಬಾಣ ಬಿಟ್ಟಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿರುವ ಅವರು, ಹಣಕಾಸು ಆಯೋಗದಲ್ಲೂ ನಮಗೆ ಅನ್ಯಾಯವಾಗಿದೆ. ತೆರಿಗೆ ಪಾಲಿನಲ್ಲೂ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.

ಕೇಂದ್ರದಿಂದ ರಾಜ್ಯಕ್ಕೆ, ನಾಡಿನ ಜನತೆಗೆ ಅನ್ಯಾಯ ಆಗುತ್ತಿದ್ದರೂ ರಾಜ್ಯದಿಂದ ಆಯ್ಕೆಯಾದ ಸಂಸದರು ನಾಲ್ಕೂವರೆ ವರ್ಷಗಳ ಕಾಲ ನಾಡಿನ ಜನತೆಯ ಪರವಾಗಿ ಬಾಯಿ ಬಿಡಲಿಲ್ಲ. ಇದನ್ನು ರಾಜ್ಯದ ಜನತೆ ಗಮನಿಸಿದ್ದಾರೆ. ಹೀಗಾಗಿ ಬರಲಿರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಜನಪರವಾಗಿ ಕೆಲಸ ಮಾಡಬೇಕು ಎಂದು ಶಾಸಕರಿಗೆ ಕರೆ ಕೊಟ್ಟಿದ್ದಾರೆ.

ಇದನ್ನೂ ಓದಿ : ಪಠ್ಯಪುಸ್ತಕ ಪರಿಷ್ಕರಣೆ ಮಾಡೇ ಮಾಡ್ತೀವಿ : ಸಚಿವ ಪ್ರಿಯಾಂಕ್ ಖರ್ಗೆ

ಬಿಜೆಪಿ ತಕ್ಕ ಉತ್ತರ ಕೊಡಬೇಕು

ಕೋವಿಡ್, ಪ್ರವಾಹದ ಸಂದರ್ಭದಲ್ಲೂ ಈ ಸಂಸದರು ರಾಜ್ಯದ ಪರವಾಗಿ ಕೇಂದ್ರದ ಮುಂದೆ ಬಾಯಿ ಬಿಡಲಿಲ್ಲ. ಹೀಗಾಗಿ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಇವರಿಗೆ ಸರಿಯಾದ ಉತ್ತರ ಕೊಡಬೇಕು. ವಿಧಾನಸಭೆ ಅಧಿವೇಶನದಲ್ಲಿ ಕಡ್ಡಾಯವಾಗಿ ಹೆಚ್ಚು ಕ್ರಿಯಾಶೀಲತೆಯಿಂದ ಭಾಗವಹಿಸಿ ಎಂದು ಹೇಳಿದ್ದಾರೆ.

ಬಿಜೆಪಿ ಸುಳ್ಳು ಆರೋಪ ಎದುರಿಸೋಣ

ರಾಜ್ಯದ ಜನತೆ ಅಪಾರ ನಿರೀಕ್ಷೆಗಳ ಜತೆಗೆ ನಮಗೆ ಅಪಾರ ಬಹುಮತದ ಮೂಲಕ ಜವಾಬ್ದಾರಿ ವಹಿಸಿದ್ದಾರೆ. 5 ವರ್ಷಗಳ ಕಾಲ ಅಭಿವೃದ್ಧಿ ಕಡೆಗೆ ಗಮನಹರಿಸಿ. ನಿಮ್ಮ ಕ್ಷೇತ್ರಗಳ ಜನರ ನಿರೀಕ್ಷೆ ಈಡೇರಿಸಿ. ನಮ್ಮ ನಾಡಿನ‌ ಜನತೆ ಕಟ್ಟುವ ತೆರಿಗೆಯಲ್ಲಿ ನಮ್ಮ ಪಾಲು ಸಮರ್ಪಕವಾಗಿ ಬರುತ್ತಿಲ್ಲ. ನಾವು ಕ್ರಿಯಾಶೀಲ ಒತ್ತಡ ಮತ್ತು ಬೇಡಿಕೆ ಮೂಲಕ ನಮ್ಮ ಪಾಲನ್ನು ನಾವು ಪಡೆದುಕೊಳ್ಳಬೇಕು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಬಿಜೆಪಿಯವರು ಮಾಡುವ ಸುಳ್ಳು ಅಪಾದನೆಗಳನ್ನು ಯಶಸ್ವಿಯಾಗಿ ಎದುರಿಸಲು ಎಲ್ಲಾ ಶಾಸಕರು ಕಡ್ಡಾಯವಾಗಿ ಅಧಿವೇಶನದಲ್ಲಿ ಭಾಗವಹಿಸಬೇಕು ಎಂದು ಶಾಸಕರಿಗೆ ಸಲಹೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES