Monday, December 23, 2024

ಅಂತ ರೀ-ರಿಲೀಸ್ : ಮೇ 29ರಿಂದ ಬೆಳ್ಳಿಪರದೆ ಮೇಲೆ ‘ರೆಬೆಲಿಸಂ’ ಅನಾವರಣ

ಬೆಂಗಳೂರು : 80ರ ದಶಕದಲ್ಲಿ ಸೆನ್ಸಾರ್ ವಿಚಾರ ಇಂದಿರಾ ಗಾಂಧಿ ಪಾರ್ಲಿಮೆಂಟ್​​ವರೆಗೂ ಹೋಗಿದ್ದ ‘ಅಂತ’ ಸಿನಿಮಾ, ಇದೀಗ ರೀ-ರಿಲೀಸ್ ಆಗುತ್ತಿದೆ. ಅದೂ ಬದಲಾದ ತಂತ್ರಜ್ಞಾನದಲ್ಲಿ ಅನ್ನೋದು ವಿಶೇಷ.

ಹೌದು, ಅಂಬರೀಶ್​ಗೆ ರೆಬೆಲ್ ಸ್ಟಾರ್ ಪಟ್ಟ ತಂದುಕೊಟ್ಟ ಹಾಗೂ ಪರಭಾಷೆಗಳಿಗೂ ರಿಮೇಕ್ ಆದ ಬ್ಲಾಕ್ ಬಸ್ಟರ್ ಹಿಟ್ ಚಿತ್ರ ಅಂತ ಮತ್ತೆ ಬೆಳ್ಳಿ ಪರದೆ ಮೇಲೆ ಕಮಾಲ್ ಮಾಡಲು ಎಂಟ್ರಿ ಕೊಡಲಿದೆ. ಇದೇ ಮೇ 29ರಂದು ರೆಬಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರು ಅಭಿನಯಿಸಿದ್ದ ಸೂಪರ್ ಹಿಟ್ ಅಂತ ಚಿತ್ರ ಮರು ಬಿಡುಗಡೆಯಾಗುತ್ತಿದೆ.

ನಲವತ್ತು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಈಗ ಹೊಸ ತಂತ್ರಜ್ಞಾನದ ಟಚ್ ನೀಡಲಾಗಿದೆ. 70ಕ್ಕೂ ಅಧಿಕ ಸ್ಕ್ರೀನ್ಸ್​​ನಲ್ಲಿ ಜಯಣ್ಣ ಫಿಲಂಸ್ ಬಿಡುಗಡೆ ಮಾಡ್ತಿರೋ ಈ ಚಿತ್ರ, 35MMನಿಂದ 70MM ಫ್ರೇಮ್ಸ್ ರೂಪ ಪಡೆದಿದೆ.

ಸೌಂಡ್, ಕಲರಿಂಗ್ ಎಲ್ಲವನ್ನೂ ಈಗಿನ ರೀತಿಗೆ ಬದಲಿಸಲಾಗಿದೆ. 1981ನೇ ಇಸವಿಯಲ್ಲಿ ತೆರೆಕಂಡ ಈ ಸಿನಿಮಾ, ಸೆನ್ಸಾರ್ ವಿಚಾರ ಸಾಕಷ್ಟು ವಿವಾದಗಳನ್ನ ಸೃಷ್ಟಿಸಿತ್ತು. ಅತಿಯಾದ ಕ್ರೌರ್ಯದ ಸೀಕ್ವೆನ್ಸ್​​ಗಳಿಗೆ ಕತ್ತರಿ ಹಾಕೋ ವಿಚಾರ ಇದು ಇಂದಿರಾಗಾಂಧಿ ಅವ್ರ ಪಾರ್ಲಿಮೆಂಟ್​​ವರೆಗೂ ಚರ್ಚೆಗೆ ಗ್ರಾಸವಾಗಿತ್ತು. ಅಂಬರೀಶ್ ಆಪ್ತ ಎಸ್. ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಹಾಗೂ ವೇಣು ನಿರ್ಮಾಣದ ಈ ಸಿನಿಮಾದಲ್ಲಿ ಅಂಬಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಸಾಲು ಸಾಲು ಪ್ರಶಸ್ತಿ ಬಾಚಿದ್ದ ಅಂತ

ನಿಷ್ಠಾವಂತ ಪೊಲೀಸ್ ಇನ್ಸ್​ಪೆಕ್ಟರ್ ಸುಶೀಲ್ ಕುಮಾರ್ ಹಾಗೂ ಗ್ಯಾಂಗ್​ಸ್ಟರ್ ಕನ್ವರ್​​ಲಾಲ್ ಹೀಗೆ ಇವರಿಬ್ಬರ ನಡುವಿನ ಟಗ್ ಆಫ್ ವಾರ್ ನೋಡುಗರ ಹುಬ್ಬೇರಿಸಿತ್ತು. ಈ ಸಿನಿಮಾದ ನಟನೆಗಾಗಿ ಚಿತ್ರಕ್ಕೆ ಸ್ಟೇಟ್ ಅವಾರ್ಡ್​ ಜೊತೆ ಸಾಲು ಸಾಲು ಪ್ರಶಸ್ತಿಗಳು ಲಭಿಸಿದವು. ಅಂಬಿ ಮನೋಜ್ಞ ಅಭಿನಯಕ್ಕೆ ಬಾಕ್ಸ್ ಆಫೀಸ್ ಬ್ಯಾಂಗ್ ಆಗಿದ್ದಲ್ಲದೆ, ಅವ್ರಿಗೆ ರೆಬೆಲ್ ಸ್ಟಾರ್ ಬಿರುದು ಕೂಡ ಬಂತು. ಲಕ್ಷ್ಮೀ ಹಾಗೂ ಲತಾ ಅವರು ಅಂಬರೀಶ್ ಜೊತೆ ಲೀಡ್​​ನಲ್ಲಿ ಚಿತ್ರದ ತೂಕ ಹೆಚ್ಚಿಸಿದ್ದರು.

ತೆಲುಗು, ತಮಿಳು, ಹಿಂದೆಗೆ ರಿಮೇಕ್

ಅಂದಹಾಗೆ ಅಂತ ಸಿನಿಮಾ ಕನ್ನಡದಲ್ಲಿ ತೆರೆಕಂಡು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದಲ್ಲದೆ, ನಿರ್ಮಾಪಕ ಖಜಾನೆ ತುಂಬುವಂತೆ ಮಾಡಿತ್ತು. ಪರಭಾಷಿಗರು ಕೂಡ ಈ ಸಿನಿಮಾದಿಂದ ಪ್ರಭಾವಿತರಾಗಿ, ತೆಲುಗಿನಲ್ಲಿ ಇದು ಅಂತಂ ಕಾದಿದಿ ಆರಂಭಂ, ತಮಿಳಲ್ಲಿ ತ್ಯಾಗಿ, ಹಿಂದಿಯಲ್ಲಿ ಮೇರಿ ಆವಾಜ್ ಸುನೋ ಟೈಟಲ್​​ಗಳಲ್ಲಿ ಸುಮಾರು ಮೂರು ಭಾಷೆಗಳಿಗೆ ರಿಮೇಕ್ ಸಹ ಆಯ್ತು.

ಜಯಮಾಲ, ಪಂಡರಿ ಬಾಯಿ, ವಜ್ರಮುನಿ, ಟೈಗರ್ ಪ್ರಭಾಕರ್, ಶಕ್ತಿ ಪ್ರಸಾದ್, ಮುಸುರಿ ಕೃಷ್ಣಮೂರ್ತಿ ಅಂತಹ ದಿಗ್ಗಜ ಕಲಾವಿದರ ಸಮಾಗಮಕ್ಕೆ ಸಾಕ್ಷಿ ಆಗಿದ್ದ ಅಂತ ಸಿನಿಮಾ, ಇದೀಗ ದೊಡ್ಡ ಪರದೆ ಬೆಳಗಲಿರೋದು ಖುಷಿಯ ವಿಚಾರ. ಇದನ್ನ ಅಂಬಿ 71ನೇ ಬರ್ತ್ ಡೇಗೆ ಟ್ರಿಬ್ಯೂಟ್ ಆಗಿ ನೀಡ್ತಿರೋ ಎಸ್​.ವಿ ರಾಜೇಂದ್ರ ಸಿಂಗ್ ಬಾಬು ಹಾಗೂ ನಿರ್ಮಾಪಕ ವೇಣು, ಒಂದಷ್ಟು ಮಾಹಿತಿ ಹಂಚಿಕೊಂಡರು.

ಒಟ್ಟಾರೆ, ಎವರ್​ಗ್ರೀನ್ ಸಿನಿಮಾಗಳು ಹೀಗೆ ರೀ ರಿಲೀಸ್ ಆಗೋದ್ರಿಂದ ಕನ್ನಡ ಚಿತ್ರರಂಗ ಜಮಾನದಲ್ಲೇ ಎಷ್ಟು ಸಮೃದ್ಧವಾಗಿ ಬೆಳೆದಿತ್ತು ಅನ್ನೋದಕ್ಕೆ ಸಾಕ್ಷಿ ಆಗಲಿದೆ. ಇದೇ ಶುಕ್ರವಾರದಿಂದ ರೆಬೆಲ್​ಸ್ಟಾರ್ ರೆಬೆಲಿಸಂ ಬೆಳ್ಳಿಪರದೆ ಮೇಲೆ ರಿವೀಲ್ ಆಗಲಿದೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES