ಬೆಂಗಳೂರು : ನಂದಮೂರಿ ಬಾಲಕೃಷ್ಣ ಸಾರಥ್ಯದಲ್ಲಿ ಎನ್ಟಿಆರ್ ಶತಮಾನೋತ್ಸವ ಕಾರ್ಯಕ್ರಮ ಬಹಳ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ನೆರವೇರಿತು.
ಹೈದರಾಬಾದ್ನಲ್ಲಿ ನಡೆದ ಈ ಅವಿಸ್ಮರಣೀಯ ಕಾರ್ಯಕ್ರಮದ ವೇದಿಕೆ, ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್, ರಾಮ್ ಚರಣ್ ತೇಜಾ, ವೆಂಕಟೇಶ್ ಸೇರಿದಂತೆ ಸಾಕಷ್ಟು ಮಂದಿ ತಾರೆಯರ ಸಮಾಗಮಕ್ಕೆ ಸಾಕ್ಷಿ ಆಯ್ತು. ಚಿರಂಜೀವಿ ತನಯ ರಾಮ್ ಚರಣ್ ಹಾಜರಾದ ಈ ಕಾರ್ಯಕ್ರಮಕ್ಕೆ ಜೂನಿಯರ್ ಎನ್ಟಿಆರ್ ಗೈರಾಗಿದ್ದು ಒಂದಷ್ಟು ಗುಮಾನಿಗಳಿಗೆ ಕಾರಣವಾಗಿದೆ.
ಮೇ 28ನೇ ತಾರೀಖು ಬಂದರೆ ತೆಲುಗಿನ ಎವರ್ಗ್ರೀನ್ ಸೂಪರ್ ಸ್ಟಾರ್ ಕಮ್ ಮಾಜಿ ಸಿಎಂ ಎನ್ಟಿ ರಾಮಾರಾವ್ಗೆ ನೂರು ವರ್ಷ. ಶತಮಾನೋತ್ಸವಕ್ಕೆ ಇನ್ನೂ ಒಂದು ವಾರದ ಮೊದಲೇ ಎನ್ಟಿಆರ್ ಅವರ ಮುದ್ದಿನ ಮಗ ನಂದಮೂರಿ ಬಾಲಕೃಷ್ಣ, ತನ್ನದೇ ನೇತೃತ್ವದಲ್ಲಿ ಹೈದರಾಬಾದ್ನಲ್ಲಿ ಬಹುದೊಡ್ಡ ಕಾರ್ಯಕ್ರಮವೊಂದನ್ನು ಮಾಡಿದ್ದಾರೆ. ಆ ಮೂಲಕ ತನ್ನ ಕರ್ತವ್ಯ ಹಾಗೂ ಬದ್ಧತೆ ಮೆರೆದಿದ್ದಾರೆ.
ಸಿನಿಮಾ, ರಾಜಕಾರಣದಲ್ಲಿ ದಾಖಲೆ
ತೆಲುಗು ಚಿತ್ರರಂಗದ ಮೇರುನಟ, ಪ್ರತಿಯೊಬ್ಬ ತೆಲುಗು ಮಂದಿ ಹೆಮ್ಮೆ ಪಡೋ ಅಂತಹ ರಾಜಕಾರಣಿಯಾಗಿ ಚರಿತ್ರೆ ಸೃಷ್ಟಿಸಿದ ಮಹಾನ್ ಪುರುಷ ಎನ್ಟಿ ರಾಮಾರಾವ್. ಸಿನಿಮಾ ಹಾಗೂ ರಾಜಕಾರಣ ಹೀಗೆ ಎರಡೂ ಕ್ಷೇತ್ರಗಳಲ್ಲಿ ಇವರು ಹತ್ತಾರು ದಾಖಲೆಗಳನ್ನು ಬರೆದರು. ಅಲ್ಲದೆ, ತಮ್ಮ ನಂದಮೂರಿ ಕುಟುಂಬದಿಂದ ಬಾಲಕೃಷ್ಣ, ಜೂನಿಯರ್ ಎನ್ಟಿಆರ್ ಅಂತಹ ಸ್ಟಾರ್ಗಳನ್ನು ಇಂಡಸ್ಟ್ರಿಗೆ ನೀಡಿದರು.
ಶತಮಾನೋತ್ಸವಕ್ಕೆ ಮೆರಗು ತಂದ ಶಿವಣ್ಣ
1923 ಮೇ 28ರಂದು ನಿಮ್ಮಕೂರು ಅನ್ನೋ ಕುಗ್ರಾಮದಲ್ಲಿ ಜನಿಸಿದ ಎನ್ಟಿಆರ್, ತನ್ನ 72ನೇ ವಯಸ್ಸಿಗೆ ಇಡೀ ರಾಜ್ಯವನ್ನೇ ಆಳಿದರು. ಜನ ಅವರನ್ನು ಇಂದಿಗೂ ದೇವರಂತೆ ಪೂಜಿಸೋ ವ್ಯಕ್ತಿತ್ವವಾಗಿ ಬೆಳೆದರು. ವ್ಯಕ್ತಿ ಸತ್ತರೂ, ಅವರ ವ್ಯಕ್ತಿತ್ವ ಹಾಗೂ ಅವರ ವರ್ಚಸ್ಸಿಗಿರೋ ಶಕ್ತಿ ಮಾತ್ರ ಕಿಂಚಿತ್ತೂ ಕುಂದಿಲ್ಲ. ಬಾಲಯ್ಯ ನಡೆಸಿದ ಆ ಅವಿಸ್ಮರಣೀಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮ ಕನ್ನಡದ ಶಿವರಾಜ್ಕುಮಾರ್, ಚಿರು ತನಯ ರಾಮ್ ಚರಣ್, ವಿಕ್ಟರಿ ವೆಂಕಟೇಶ್, ನಾಗಚೈತನ್ಯ ಸೇರಿದಂತೆ ಸಾಕಷ್ಟು ಮಂದಿ ತಾರೆಯರು ಭಾಗಿಯಾಗಿದರು.
ನಾನು ಬಾಲಕೃಷ್ಣ ಒಟ್ಟಿಗೆ ಸಿನಿಮಾ ಮಾಡ್ತೀವಿ
ಅಂದಹಾಗೆ ಸ್ಯಾಂಡಲ್ವುಡ್ ಲೀಡರ್ ಶಿವರಾಜ್ಕುಮಾರ್ ಹಾಗೂ ಬಾಲಯ್ಯ ಒಂಥರಾ ಬ್ರದರ್ಸ್ ಅನ್ನೋದು ಎಲ್ಲರಿಗೂ ಗೊತ್ತೇಯಿದೆ. ಎನ್ಟಿಆರ್-ರಾಜ್ಕುಮಾರ್ ಅವರಲ್ಲಿದ್ದ ಬಾಂಧವ್ಯವನ್ನು ಇಂದಿಗೂ ಇವರುಗಳು ಮುಂದುವರೆಸಿದ್ದಾರೆ. ಇಬ್ಬರೂ ಒಟ್ಟಿಗೆ ಗೌತಮಿಪುತ್ರ ಶಾತಕರ್ಣಿಯಲ್ಲಿ ನಟಿಸಿದರು. ಆದ್ರೀಗ ಅದೇ ವೇದಿಕೆಯಲ್ಲಿ ಎನ್ಟಿಆರ್ ರನ್ನ ಗುಣಗಾನ ಮಾಡಿದ ಶಿವಣ್ಣ, ಚೆನ್ನೈ ಡೇಸ್ನ ನೆನೆಯೋದ್ರ ಜೊತೆಗೆ ನಾನು ಬಾಲಕೃಷ್ಣ ಒಟ್ಟಿಗೆ ಸಿನಿಮಾ ಮಾಡ್ತೀವಿ ಎಂದರು.
ಟಾಲಿವುಡ್ ಹಾಗೂ ನಂದಮೂರಿ ಕುಟುಂಬದ ಜೊತೆ ಶಿವಣ್ಣನ ಬಾಂಧವ್ಯ ಇದ್ರಿಂದ ಮತ್ತಷ್ಟು ಗಟ್ಟಿಯಾಗಿದ್ದು, ಆದಷ್ಟು ಬೇಗ ಇವರ ಕಾಂಬೋನಲ್ಲಿ ಹೈ ವೋಲ್ಟೇಜ್ ಌಕ್ಷನ್ ವೆಂಚರ್ ಹೊರಬರಲಿ ಅನ್ನೋದು ಅಭಿಮಾನಿಗಳ ಆಶಯ. ಇನ್ನೂ ಚಂದ್ರಬಾಬು ನಾಯ್ಡು ಸೇರಿದಂತೆ ಒಂದಷ್ಟು ರಾಜಕಾರಣಿಗಳು ಹಾಗೂ ಸಿನಿಮಾ ಮಂದಿಯ ಸಮಾಗಮದಿಂದ ವೇದಿಕೆ ಸಖತ್ ಕಲರ್ಫುಲ್ ಅನಿಸಿತು. ಅಲ್ಲದೆ, ನಟ ಶಿವಾರೆಡ್ಡಿ ಎನ್ಟಿಆರ್ ಹಾಗೂ ಬಾಲಯ್ಯ ದಾಟಿಯಲ್ಲಿ ಮಿಮಿಕ್ರಿ ಮಾಡಿದ್ದು ಮಾತ್ರ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿತ್ತು.
- ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ