Thursday, November 21, 2024

ಮೋದಿ ಎಲ್ಲಾನೂ ತಾನೇ ಅಂತಾನೆ : ಮಲ್ಲಿಕಾರ್ಜುನ ಖರ್ಗೆ ಕಿಡಿ

ಬೆಂಗಳೂರು : ಅಡಿಗಲ್ಲು ಹಾಕಲೂ ಮೋದಿನೇ, ಉದ್ಘಾಟನೆಗೂ ಮೋದಿನೇ, ಸಿಂಹ ಅಳವಡಿಕೆಗೂ ಮೋದಿನೇ ಬೇಕಾ? ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ಸಂಸತ್ ಭವನ ಉದ್ಘಾಟನೆ ರಾಷ್ಟ್ರದ ಪ್ರಥಮ ಪ್ರಜೆಯಿಂದ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಸಾಕಷ್ಟು ರೈಲು ಬಿಟ್ರಿ. ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿ ಅವರಿಗೆ ಕೊಡಬಾರದಾ? ಹಿಂದುಳಿದವರಿಗೆ ರಾಷ್ಟ್ರಪತಿ ಮಾಡಿದ್ದಿವಿ ಅಂತಿರಿ. ಆದ್ರೆ ಇಂತದ್ದಕ್ಕೆಲ್ಲಾ ನೀವೆ ಮುಂದಾಗ್ತೀರಿ. ಇದು ರಾಷ್ಟ್ರದ ಪ್ರತಿಷ್ಠೆಯ ಪ್ರಶ್ನೆ, ಯಾಕೆ ರಾಷ್ಟ್ರಪತಿ ಅವರಿಗೆ ಕರೆಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಎಲ್ಲಾನೂ ತಾನೇ ಅಂತಾನೆ. ಬರೀ ತೋರಿಸಲಿಕ್ಕೆ ಮಾಡಿದ್ರೆ ಏನು ಉಪಯೋಗ ಎಂದು ಮೋದಿ ವಿರುದ್ದ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.

ಇನ್ನೂ ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ ಅವರು, ದೇಶದ ಪ್ರಥಮ ಪ್ರಜೆಯೂ ಆಗಿರುವ ರಾಷ್ಟ್ರಪತಿಗಳು ಭಾರತದ ಅತ್ಯುನ್ನತ ಶಾಸಕಾಂಗದ ಅತ್ಯುನ್ನತ ಸಾಂವಿಧಾನಿಕ ಪ್ರಾಧಿಕಾರವಾಗಿರುವುದರಿಂದ, ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಸಾಂವಿಧಾನಿಕ ಔಚಿತ್ಯಕ್ಕೆ ಸರ್ಕಾರದ ಬದ್ಧತೆಯನ್ನು ಸಂಕೇತಿಸುವ ಹೊಸ ಕಟ್ಟಡವನ್ನು ಅವರು ಉದ್ಘಾಟಿಸಬೇಕು ಎಂದಿದ್ದಾರೆ.

ಇದನ್ನೂ ಓದಿ : ಕರುನಾಡಲ್ಲಿ ‘ಶಾಂತಿ, ಸಾಮರಸ್ಯ, ಪ್ರಗತಿ’ ಸಾಧಿಸಲು ಕಾಂಗ್ರೆಸ್ ಬದ್ಧ : ಸೋನಿಯಾ ಗಾಂಧಿ

ಮುರ್ಮುಗೆ ಆಹ್ವಾನವೇ ನೀಡಿಲ್ಲ

ಮಾಜಿ ರಾಷ್ಟ್ರಪತಿಯಾಗಿದ್ದ ರಾಮನಾಥ್‌ ಕೋವಿಂಡ್‌ ಅವರನ್ನು ಹೊಸ ಸಂಸತ್‌ ಭವನದ ಶಿಲಾನ್ಯಾಸ ಕಾರ್ಯಕ್ರಮಕ್ಕೂ ಆಹ್ವಾನ ನೀಡಲಾಗಿರಲಿಲ್ಲ. ಈಗ ಭಾರತದ ರಾಷ್ಟ್ರಪತಿಯಾಗಿರುವ ದ್ರೌಪದಿ ಮುರ್ಮು ಅವರನ್ನು ಹೊಸ ಸಂಸತ್‌ ಭವನದ ಉದ್ಘಾಟನೆಗೆ ಆಹ್ವಾನ ನೀಡಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತದ ಸಂಸತ್ತು ಭಾರತ ಗಣರಾಜ್ಯದ ಸರ್ವೋಚ್ಚ ಶಾಸಕಾಂಗ ಸಂಸ್ಥೆಯಾಗಿದೆ ಮತ್ತು ಭಾರತದ ರಾಷ್ಟ್ರಪತಿಗಳು ಅದರ ಅತ್ಯುನ್ನತ ಸಾಂವಿಧಾನಿಕ ಅಧಿಕಾರವಾಗಿದೆ. ಅವರು ಮಾತ್ರವೇ ಸರ್ಕಾರ, ವಿರೋಧ ಪಕ್ಷ ಹಾಗೂ ಪ್ರತಿ ನಾಗರಿಕರನ್ನು ಪ್ರತಿನಿಧಿಸುತ್ತಾರೆ. ಅವರು ಭಾರತದ ಪ್ರಥಮ ಪ್ರಜೆ. ಅವರು ನೂತನ ಸಂಸತ್ ಭವನದ ಉದ್ಘಾಟನೆಯು ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಸಾಂವಿಧಾನಿಕ ಔಚಿತ್ಯಕ್ಕೆ ಸರ್ಕಾರದ ಬದ್ಧತೆಯನ್ನು ಸಂಕೇತಿಸುತ್ತದೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES