Wednesday, January 22, 2025

ಯಾವ ಜಿಲ್ಲೆಗೆ ಒಲಿಯುತ್ತೆ ಹೆಚ್ಚು ಸಚಿವ ಸ್ಥಾನ? : ರೇಸ್ ನಲ್ಲಿ ಇರುವವರೆಲ್ಲಾ ಘಟಾನುಘಟಿಗಳೇ?

ಬೆಂಗಳೂರು : ನಾಳೆ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ, ಇತ್ತ ಸಿದ್ದರಾಮಯ್ಯನ ಸಂಪುಟ ಸೇರಲು ಆಕಾಂಕ್ಷಿಗಳು ಕಸರತ್ತು ನಡೆಸುತ್ತಿದ್ದಾರೆ. ಇಂದು ಆಕಾಂಕ್ಷಿಗಳು ದೆಹಲಿಗೆ ತೆರಳಿದ್ದಾರೆ.

ಹಲವು ಜಿಲ್ಲೆಗಳಲ್ಲಿ ಪ್ರಭಾವಿ ಶಾಸಕರು ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಯಾವ ಜಿಲ್ಲೆಯ ಶಾಸಕರಿಗೆ ಹೆಚ್ಚು ಸಚಿವ ಸ್ಥಾನ ಮತ್ತು ಪ್ರಭಾವಿ ಖಾತೆ ಸಿಗುತ್ತದೆ ಎನ್ನುವುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

ಮೈಸೂರು ಭಾಗದಲ್ಲಿ ಕಾಂಗ್ರೆಸ್​​​ ನಾಯಕರು ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಶಾಸಕರಾದ ಡಾ. ಹೆಚ್.ಸಿ ಮಹಾದೇವಪ್ಪ, ತನ್ವಿರ್ ಸೇಠ್, ವೆಂಕಟೇಶ್ ಕಾಂಗ್ರೆಸ್​​ನ ಹಿರಿಯ ನಾಯಕರಾಗಿದ್ದು, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಶಾಸಕ ಸಿ. ಪುಟ್ಟರಂಗಶೆಟ್ಟಿಗೆ ಮತ್ತೊಮ್ಮೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ.

ಬೆಳಗಾವಿ ಜಿಲ್ಲೆಯಲ್ಲೂ ಸಚಿವಾಕಾಂಕ್ಷಿಗಳು ಪುಟಿದೇಳುತ್ತಿದ್ದಾರೆ. ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​​, ಯಮಕನಮರಡಿ ಶಾಸಕ ಸತೀಶ್​ ಜಾರಕಿಹೊಳಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದು, ಪ್ರಬಾವಿ ಖಾತೆ ಒಲಿದು ಬರುವ ಸಾಧ್ಯತೆ ಇದೆ. ಇನ್ನೊಂದೆಡೆ ಅಥಣಿಯಲ್ಲಿ ಗೆದ್ದು ಬೀಗಿರುವ ಲಕ್ಷ್ಮಣ ಸವದಿಯೂ ಸಹ ಸಚಿವ ಸ್ಥಾನಕ್ಕಾಗಿ ಬೇಡಿಕೆಯಿಟ್ಟಿದ್ದಾರೆ. ಬೀದರ್​ನಲ್ಲಿ ಪ್ರಭಾವಿ ಶಾಸಕ ಈಶ್ವರ್​ ಖಂಡ್ರೆಗೆ ಉತ್ತಮ ಖಾತೆ ಒಲಿದು ಬರುವ ಸಾಧ್ಯತೆ ಇದೆ.

ತುಮಕೂರಲ್ಲಿ ಘಟಾನುಘಟಿಗಳ ತೀವ್ರ ಲಾಭಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 2 ಸಚಿವ ಸ್ಥಾನ ಸಿಗುವ ಭರವಸೆ ಇದೆ. ಈ ಕುರಿತು ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಮತ್ತು ದೇವನಹಳ್ಳಿ ಶಾಸಕ ಕೆ‌.ಎಚ್.ಮುನಿಯಪ್ಪ ವರಿಷ್ಠರ ಜೊತೆ ಚರ್ಚೆ ನಡೆಸಲು ದೆಹಲಿಗೆ ತೆರಳಿದ್ದಾರೆ. ಇನ್ನು ತುಮಕೂರು ಜಿಲ್ಲೆಯಲ್ಲಿ ಆಕಾಂಕ್ಷಿಗಳು ತೀವ್ರ ಲಾಭಿ ನಡೆಸುತ್ತಿದ್ದಾರೆ. ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ, ಜಯಚಂದ್ರ, ಎಸ್.ಆರ್.ಶ್ರೀನಿವಾಸ್​​ಗೆ ಸಚಿವ ಸ್ಥಾನ ಪಕ್ಕಾ ಎಂದು ಹೇಳಲಾಗ್ತಿದೆ. ಹಾಸನದಲ್ಲಿ ಹಿರಿಯ ಶಾಸಕ ಕೆ.ಎಂ ಶಿವಲಿಂಗೇಗೌಡಗೆ ಸಚಿವ ಸ್ಥಾನ ಪಕ್ಕಾ ಎಂದು ಹೇಳಲಾಗುತ್ತಿದೆ.

ಚಿತ್ರದುರ್ಗದಲ್ಲಿ ಒಬ್ಬರಿಗೆ ಮಂತ್ರಿ ಭಾಗ್ಯ

ಹುಬ್ಬಳ್ಳಿ-ಧಾರವಾಡದಲ್ಲೂ ಎರಡು ಶಾಸಕರಿಗೆ ಸಚಿವ ಸ್ಥಾನ ದಕ್ಕುವ ಸಾಧ್ಯತೆಯಿದೆ. ವಿನಯ್​ ಕುಲಕರ್ಣಿ ಮತ್ತು ಜಗದೀಶ್​ ಶೆಟ್ಟರ್​ಗೆ ಸಚಿವ ಸ್ಥಾನ ಒಲಿದು ಬರುವ ಸಾಧ್ಯತೆಯಿದೆ. ಬಾಗಲಕೋಟೆಯಲ್ಲಿ ವಿಜಯಾನಂದ ಕಾಶಪ್ಪನವರು ಸಹ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಇನ್ನು ಚಿತ್ರದುರ್ಗದಲ್ಲಿ ಎನ್.ವೈ ಗೋಪಾಲಕೃಷ್ಣ, ರಘುಮೂರ್ತಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಚಿತ್ರದುರ್ಗದಲ್ಲಿ ಇಬ್ಬರ ಪೈಕಿ ಒಬ್ಬರಿಗೆ ಒಲಿದು ಬರುವ ಸಾಧ್ಯತೆಯಿದೆ.

ಒಟ್ಟಾರೆ, ಹಲವು ಜಿಲ್ಲೆಗಳಲ್ಲಿ ಆಕಾಂಕ್ಷಿಗಳು ಸಂಪುಟ ಸ್ಥಾನ ಗಿಟ್ಟಿಸಿಕೊಳ್ಳಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಹೈಕಮಾಂಡ್​ ಯಾರಿಗೆ ಮಣೆ ಹಾಕುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

RELATED ARTICLES

Related Articles

TRENDING ARTICLES