ಬೆಂಗಳೂರು : ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಕೌಂಟ್ ಡೌನ್ ಶುರುವಾಗಿದೆ. ಈ ಮಧ್ಯೆ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಅಭಿಮಾನಿಗಳು ಇಂದಿರಾ ಕ್ಯಾಂಟಿನ್ ನಲ್ಲಿ ಹೋಳಿಗೆ ಹಂಚಿ ಸಂಭ್ರಮಿಸಿದ್ದಾರೆ.
ಹೌದು, ಸಿದ್ದರಾಮಯ್ಯ ರಾಜ್ಯದ ಮಾಸ್ ಲೀಡರ್. ಎರಡನೇ ಬಾರಿಗೆ ರಾಜ್ಯದ ಸಿಎಂ ಆಗಿ ಆಯ್ಕೆಯಾಗಿರೋ ಸಿದ್ದರಾಮಯ್ಯಗೆ ನಾಳೆ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪಟ್ಟಾಭಿಷೇಕ ನೆರವೇರಲಿದೆ.
ರಾಜ್ಯದಲ್ಲಿ 135 ಸ್ಥಾನಗಳ ಮೂಲಕ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗ್ತಾರ, ಡಿಕೆಶಿ ಮುಖ್ಯಮಂತ್ರಿ ಆಗ್ತಾರ ಅನ್ನೋ ಹಗ್ಗ ಜಗ್ಗಾಟದ ನಡುವೆ ಹೈ ಕಮಾಂಡ್ ಸಿದ್ದರಾಮಯ್ಯ ಅವರೇ ರಾಜ್ಯದ ಸಿಎಂ ಅಂತಾ ಘೋಷಣೆ ಮಾಡಿದೆ. ಉಪಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಈಗಾಗಲೇ ಸಿದ್ದು ಅಭಿಮಾನಿಗಳು ರಾಜ್ಯಾದ್ಯಂತ ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಇತ್ತ ಸಿದ್ದು ತವರು ಜಿಲ್ಲೆ ಮೈಸೂರಿನಲ್ಲಿ ಸಂಭ್ರಮ ಜೋರಾಗಿಯೇ ಇತ್ತು. ಮೈಸೂರಿನ ಅರಮನೆ ಬಳಿಯಿರುವ ಇಂದಿರಾ ಕ್ಯಾಂಟಿನ್ ನಲ್ಲಿ ಊಟ ಮಾಡುವ ಪ್ರತಿಯೊಬ್ಬರಿಗೂ ಹೋಳಿಗೆ ವಿತರಣೆಮಾಡಿ ವಿನೂತನವಾಗಿ ವಿಜಯೋತ್ಸವ ಆಚರಿಸಲಾಯಿತು.
ಇದನ್ನೂ ಓದಿ : ಸಿದ್ದು-ಡಿಕೆಶಿ ಪ್ರಮಾಣವಚನ ಸಮಾರಂಭಕ್ಕೆ ವರುಣನ ಕಾಟ?
ಇನ್ನೂ ಬಡವರು ಹಸಿದು ಮಲಗಬಾರದು ಅಂಥಾ ಸಿದ್ದರಾಮಯ್ಯ ಮೊದಲ ಬಾರಿಗೆ ಸಿಎಂ ಆದ ತಕ್ಷಣವೇ ಅನ್ನಭಾಗ್ಯ ಯೋಜನೆಯನ್ನ ಜಾರಿಗೆ ತಂದರು. ಜೊತೆಗೆ ಬಡವರಿಗೆ ಕಡಿಮೆ ಬೆಲೆಗೆ ಒಂದೊಂತ್ತಿನ ಊಟ ಸಿಗಬೇಕೆಂದು ಇಂದಿರಾಗಾಂಧಿ ಹೆಸರಿನಲ್ಲಿ ರಾಜ್ಯಾದ್ಯಂತ ಇಂದಿರಾ ಕ್ಯಾಂಟಿನ್ ತೆರೆಯಲಾಗಿದೆ.
ಸಿದ್ದರಾಮಯ್ಯ ಕನಸಿನ ಯೋಜನೆಯಾದ ಇಂದಿರಾಕ್ಯಾಂಟಿನಲ್ಲಿ ಇಂದು ಊಟ ಮಾಡುವ ಪ್ರತಿಯೊಬ್ಬರಿಗೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಿರುವ ಖುಷಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೋಳಿಗೆ ಹಂಚಿ ಸಂಭ್ರಮಿಸಿದರು.
ಒಟ್ಟಾರೆ, ಸಿದ್ದು ಎರಡನೇ ಬಾರಿಗೆ ಸಿಎಂ ಆಗುತ್ತಿರುವುದು ಬಡವರು ಹಾಗೂ ಮಧ್ಯಮ ವರ್ಗದ ಜನರ ನೀರಿಕ್ಷೆಗಳು ಇನ್ನಷ್ಟು ಹೆಚ್ಚಾಗಿಸುತ್ತಿದೆ.