ರಾಮನಗರ : ದೇವೇಗೌಡರು ಎರಡು ಬಾರಿ ಸೋತ ಬಳಿಕವೂ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕೃತಜ್ಞತಾ ಸಭೆಯಲ್ಲಿ ಭಾಗವಹಿಸಿ ಕುಮಾರಸ್ವಾಮಿ ಅವರು ಮಾತನಾಡಿದ್ದಾರೆ.
ಪಕ್ಷದ ಕಾರ್ಯಕರ್ತರ ಜೊತೆ ಚರ್ಚೆ ಮಾಡಿ ಏನೆಲ್ಲಾ ಆಗಿದೆ ಅನ್ನೋದರ ಬಗ್ಗೆ ಮಾಹಿತಿ ಕಲೆ ಹಾಕುತ್ತೇನೆ. ಈ ರೀತಿಯ ಫಲಿತಾಂಶ ನಮ್ಮ ಪಕ್ಷಕ್ಕೆ ಹೊಸದೇನಲ್ಲ. ಜನರು ಮುಂದಿನ ದಿನಗಳಲ್ಲಿ ಮತ್ತೆ ಜೆಡಿಎಸ್ ಬೇಕು ಅಂತ ಬಯಸ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಕೈ‘ ಗ್ಯಾರಂಟಿ ನಂಬಿ ಮತಹಾಕಿದ್ದಾರೆ
ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಜೊತೆ ನಿಲ್ಲುತ್ತೇವೆ. ನನ್ನ ನಿರೀಕ್ಷೆ ಹುಸಿಯಾಗಿದೆ. ಮಾಧ್ಯಮ ಸಂಸ್ಥೆಗಳ ನಿರೀಕ್ಷೆ ನಿಜವಾಗಿದೆ. ನಾನು ಕಳೆದ 6 ತಿಂಗಳಿಂದ ಶ್ರಮಪಟ್ಟು ಕೆಲಸ ಮಾಡಿದ್ದೆ. ಪಂಚರತ್ನ ಯೋಜನೆಗಳು ಜನರಿಗೆ ಹಿಡಿಸಲಿಲ್ಲ ಅನ್ಸುತ್ತೆ. ಕಾಂಗ್ರೆಸ್ ಪಕ್ಷದ ಉಚಿತ ಗ್ಯಾರಂಟಿಗಳನ್ನು ನಂಬಿ ಮತಹಾಕಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ : ನಾನು ಜಿಲ್ಲೆಯನ್ನು ಬಿಟ್ಟು ಹೋಗುವ ಪ್ರಶ್ನೆ ಇಲ್ಲ : ನಿಖಿಲ್ ಕುಮಾರಸ್ವಾಮಿ
ಜೆಡಿಎಸ್ ಹಿನ್ನಡೆ ಕುರಿತು ಪರಾಮರ್ಶೆ
ನನ್ನ ಗೆಲುವಿಗೆ ಕಾರಣರಾದ ಕಾರ್ಯಕರ್ತರಿಗೆ ಕೃತಜ್ಞತೆ. 90 ಸಾವಿರಕ್ಕೂ ಅಧಿಕ ಮತಗಳನ್ನು ನೀಡಿರುವ ಚನ್ನಪಟ್ಟಣ ಮತದಾರರಿಗೆ ಧನ್ಯವಾದ. ಅಲ್ಲದೇ ರಾಜ್ಯದಲ್ಲಿ ಜೆಡಿಎಸ್ ಹಿನ್ನಡೆ ಕುರಿತು ಪರಾಮರ್ಶೆ ನಡೆಸುತ್ತೇನೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿರುವ ಗ್ಯಾರಂಟಿಗಳ ಬಗ್ಗೆ ಮಾತನಾಡಿರುವ ಕುಮಾರಸ್ವಾಮಿ, ನೋಡೋಣ, ನಮಗಿಂತ ಅವರು ದೊಡ್ಡವರಲ್ವೆ. ಎಲ್ಲಾ ಲೆಕ್ಕಾಚಾರ ಮಾಡಿಯೇ ಉಚಿತ ಯೋಜನೆ ಸಿದ್ದಪಡಿಸಿದ್ದಾರೆ. ಮೊದಲು ಉಚಿತ ಅಂತ ಹೇಳಿ ಈಗ ಕೆಲವೊಂದು ಷರತ್ತು ಹಾಕುತ್ತಿದ್ದಾರೆ. ನೋಡೋಣ ಮುಂದೆ ಏನು ಮಾಡ್ತಾರೆ ಅಂತಾ ಎಂದಿದ್ದಾರೆ.