ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಕೈತಪ್ಪಿ ಡಿಸಿಎಂ ಸ್ಥಾನ ಸಿಕ್ಕರೂ ಡಿಕೆಶಿ ಸ್ವಕ್ಷೇತ್ರ ಕನಕಪುರದಲ್ಲಿ ಯಾವುದೇ ರೀತಿಯ ಸಂಭ್ರಮಾಚರಣೆ ಇಲ್ಲ. ಇತ್ತ ಚನ್ನಪಟ್ಟಣದ ಕೆಂಗಲ್ ಆಂಜನೇಯ ದೇವಾಲಯದಲ್ಲಿ ಸರ್ಕಾರ ಸುಸೂತ್ರವಾಗಿ ನಡೆಯಲಿ ಎಂದು ಬೇಸರದಿಂದಲೇ ಪೂಜೆ ನೆರವೇರಿಸಿದರು.
ಹೌದು, ಅಂತೂ ಇಂತೂ ಸಾಕಷ್ಟು ಮ್ಯಾರಥಾನ್ ಮೀಟಿಂಗ್, ಇಬ್ಬರು ನಾಯಕರ ಮನವೊಲಿಕೆ ನಡೆಸಿ ಕರ್ನಾಟಕ ಸಿಎಂ ಆಯ್ಕೆ ಕಗ್ಗಂಟಿಗೆ ಕೊನೆಗೂ ಎಐಸಿಸಿ ತೆರೆಎಳೆದಿದೆ. ಸಿಎಂ ಆಗಿ ಸಿದ್ದರಾಮಯ್ಯ ಡಿಸಿಎಂ ಆಗಿ ಡಿಕೆ ಶಿವಕುಮಾರ್ ರನ್ನು ಫೈನಲ್ ಮಾಡಿ ಘೋಷಣೆ ಮಾಡಿದೆ. ಡಿಕೆ ಶಿವಕುಮಾರ್ ಡಿಸಿಎಂ ಆದ್ರೂ ಕೂಡ ಡಿಕೆಶಿ ಸ್ವಕ್ಷೇತ್ರ ಕನಕಪುರದಲ್ಲಿ ಯಾವುದೇ ಸಂಭ್ರಮಾಚರಣೆ ಇಲ್ಲ.
ಕ್ಷೇತ್ರದಲ್ಲಿ ಶುಭಾಶಯದ ಒಂದೇ ಒಂದು ಬ್ಯಾನರ್ ಆಗಲಿ, ಪೂಜೆ ಪುನಸ್ಕಾರವಾಗಲಿ ನಡೆದಿಲ್ಲ. ಅತ್ತ ಕನಕಪುರದ ಡಿಕೆಶಿ ನಿವಾಸದ ಬಳಿ ಯಾರೊಬ್ಬ ಕಾರ್ಯಕರ್ತನೂ ಸುಳಿಯದೇ ಮನೆ ಬಿಕೋ ಎನ್ನುತ್ತಿತ್ತು. ಮತ್ತೊಂದುಕಡೆ, ಡಿಕೆಶಿಗೆ ಸಿಎಂ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಕ್ಷೇತ್ರದ ಜನರು ಇದೀಗ ಸದ್ಯದ ಮಟ್ಟಿಗೆ ಡಿಸಿಎಂ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ. ಇಂದು ಬೆಳಿಗ್ಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್ ನೇತೃತ್ವದಲ್ಲಿ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಈ ಸರ್ಕಾರ ಸುಸೂತ್ರವಾಗಿ ನಡೆಯಬೇಕು ಎಂದು ಪೂಜೆ ಸಲ್ಲಿಸಿ 101 ಇಡುಗಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಿದರು.
ಇದನ್ನೂ ಓದಿ : ಡಿಸಿಎಂ ಸ್ಥಾನ ಕೇಳುವುದು ಏನಿದೆ? ನನಗೆ ಕೊಡಲೇಬೇಕು : ಪರಮೇಶ್ವರ್
ಡಿಕೆಶಿಗೆ ಸಿಎಂ ಸ್ಥಾನ ಬಿಟ್ಟು ಕೊಡಬೇಕಿತ್ತು
ಇನ್ನೂ ಡಿ.ಕೆ ಶಿವಕುಮಾರ್ ಗೆ ಸಿಎಂ ಸ್ಥಾನ ನೀಡಬೇಕಿತ್ತು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೈಯದ್ ಜಿಯಾವುಲ್ಲಾ ತಿಳಿಸಿದರು. ರಾಜ್ಯದಲ್ಲಿ ಇಬ್ಬರು ನಾಯಕರ ಪರಿಶ್ರಮದಿಂದ ಸರ್ಕಾರ ಸ್ಪಷ್ಟಬಹುಮತ ಬಂದಿದೆ. ಸಿದ್ದರಾಮಯ್ಯ ದೊಡ್ಡ ಮನಸ್ಸು ಮಾಡಿ ಡಿ.ಕೆ ಶಿವಕುಮಾರ್ ಗೆ ಸಿಎಂ ಸ್ಥಾನ ಬಿಟ್ಟು ಕೊಡಬೇಕಿತ್ತು ಎಂದಿದ್ದಾರೆ.
ಡಿಸಿಎಂ ಸ್ಥಾನಕ್ಕೆ ಡಿಕೆಶಿ ತೃಪ್ತಿ
ಸಿದ್ದರಾಮಯ್ಯ ಈ ಹಿಂದೆ 5 ವರ್ಷ ಸಿಎಂ ಆಗಿ ಒಳ್ಳೆಯ ಆಡಳಿತ ನೀಡಿದ್ದಾರೆ. ಡಿಕೆ ಶಿವಕುಮಾರ್ ಗೆ ಸಿಎಂ ಸ್ಥಾನ ಬಿಟ್ಟುಕೊಟ್ಟು ನೋಡಬೇಕಿತ್ತು, ಆದ್ರೆ ನಾನೇ ಸಿಎಂ ಆಗ್ತೀನಿ ಅಂತಾ ಹೈಕಮಾಂಡ್ ಗೆ ಹೇಳಿದ್ದಾರೆ. ಪಕ್ಷ ಕೂಡ ತೀರ್ಮಾನ ಮಾಡಿದೆ. ಎಲ್ಲರೂ ಪಕ್ಷದ ತೀರ್ಮಾನಕ್ಕೆ ಬದ್ದರಾಗಬೇಕು ಎಂದು ಹೇಳುವ ಡಿಕೆಶಿಗೆ ಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ, ಡಿ,ಕೆ ಶಿವಕುಮಾರ್ ಗೆ ಸಿಎಂ ಸ್ಥಾನ ಸಿಗುತ್ತೆ ಎಂಬ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಜನರಿಗೆ ನಿರಾಸೆ ಉಂಟಾಗಿದ್ದು, ಡಿಸಿಎಂ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ. ಡಿಸಿಎಂ ಸ್ಥಾನ ಸಿಕ್ಕರೂ ಕೂಡ ಜಿಲ್ಲೆಯಲ್ಲಿ ಸಂಭ್ರಮಾಚರಣೆ ಇಲ್ಲ.