Monday, November 25, 2024

‘ಲವ್ ಮ್ಯಾರೇಜ್’ಗಳಿಂದಲೇ ಹೆಚ್ಚು ವಿಚ್ಛೇದನ

ಬೆಂಗಳೂರು : ಪ್ರೀತಿಸಿ ಮದುವೆಯಾದವರಲ್ಲಿಯೇ ಭಿನ್ನಾಭಿಪ್ರಾಯಗಳು ಹೆಚ್ಚಾಗಿ ವಿಚ್ಛೇದನದ ಹಂತಕ್ಕೆ ಬರುತ್ತಿವೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಕರಣವೊಂದರ ಅರ್ಜಿ ವಿಚಾರಣೆ ಸಂದರ್ಭದಲ್ಲಿ ವಿಚ್ಛೇದನ ಕೋರಿದ್ದ ದಂಪತಿಯ ನಡುವೆ ರಾಜಿ ಸಂಧಾನದ ಮೂಲಕ ಕೌಟುಂಬಿಕ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡುವ ಮುನ್ನ ಅದು ಈ ಅನಿಸಿಕೆ ಹಂಚಿಕೊಂಡಿದೆ.

ನ್ಯಾಯಮೂರ್ತಿಗಳಾದ ಬಿಆರ್ ಗವಾಯ್ ಮತ್ತು ಸಂಜಯ್ ಕರೋಲ್ ಅವರನ್ನು ಒಳಗೊಂಡ ನ್ಯಾಯಪೀಠವು ಸಂಧಾನ ಮಾತುಕತೆ ನಡೆಸುವಂತೆ ದಂಪತಿಗೆ ಸಲಹೆ ನೀಡಿತು. ಆದರೆ, ಅದಕ್ಕೆ ಗಂಡ ವಿರೋಧ ವ್ಯಕ್ತಪಡಿಸಿದ. ಇತ್ತೀಚಿಗೆ ನೀಡಿದ್ದ ತೀರ್ಪಿನ ಹಿನ್ನೆಲೆಯಲ್ಲಿ ಆತನಿಗೆ ವಿಚ್ಛೇದನ ನೀಡುವುದು ಸಾಧ್ಯ ಎಂದು ನ್ಯಾಯಪೀಠ ಹೇಳಿತು.

ಬಳಿಕ ನ್ಯಾಯಮೂರ್ತಿಗಳಿಬ್ಬರೂ ರಾಜಿ ಸಂಧಾನಕ್ಕಾಗಿ ಅವರಿಬ್ಬರನ್ನೂ ಕರೆಸಿದರು. ಇವರಿಬ್ಬರೂ ಪ್ರೇಮ ವಿವಾಹ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದಾಗ, ‘ಬಹುತೇಕ ವಿಚ್ಛೇದನಗಳು ಲವ್ ಮ್ಯಾರೇಜ್‌ಗಳಿಂದಲೇ ನಡೆಯುತ್ತಿವೆ’ ಎಂದು ನ್ಯಾಯಮೂರ್ತಿ ಗವಾಯ್ ಹೇಳಿದರು.

ಇದನ್ನೂ ಓದಿ : ಗಂಡ ‘ಚಾಕೋಲೆಟ್’ ತರದಿದ್ದಕ್ಕೆ ಹೆಂಡ್ತಿ ಆತ್ಮಹತ್ಯೆ

ವಿಚ್ಛೇದನಕ್ಕೆ 6 ತಿಂಗಳು ಕಾಯುವ ಅಗತ್ಯವಿಲ್ಲ

ವಿವಾಹ ವಿಚ್ಛೇದನಕ್ಕೆ ಇನ್ನುಮುಂದೆ ಆರು ತಿಂಗಳು ಕಾಯುವ ಅಗತ್ಯವೂ ಇಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಸರಿಪಡಿಸಲಾರದ ಮಟ್ಟಕ್ಕೆ ಮುರಿದುಬಿದ್ದಿರುವ ವಿವಾಹ ಪ್ರಕರಣಗಳ ವಿಚ್ಛೇದನಕ್ಕೆ ಸಂಬಂಧಿಸಿದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯಕ್ಕೆ ರವಾನಿಸದೆ ನೇರವಾಗಿ ವಿಚ್ಛೇದನ ನೀಡುವ ಅಧಿಕಾರ ಸಂವಿಧಾನದ 142ನೇ ಪರಿಚ್ಛೇದದಡಿ ತನಗೆ ಇದೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಇದರಿಂದಾಗಿ, ವಿಚ್ಛೇದನ ಕೋರಿ ಅರ್ಜಿ ಸಲ್ಲಿಸುವ ದಂಪತಿಗಳು 6ರಿಂದ 18 ತಿಂಗಳ ಕಾಲ ಕಾಯುವ ಅನಿವಾರ್ಯತೆ ತಪ್ಪಲಿದೆ. ದಂಪತಿಗಳು, ಸಂವಿಧಾನದ 142ನೇ ಪರಿಚ್ಛೇದದಡಿ ನೇರವಾಗಿ ಸುಪ್ರೀಂಕೋರ್ಟ್ ಮೊರೆ ಹೋಗಬಹುದಾಗಿದೆ.

RELATED ARTICLES

Related Articles

TRENDING ARTICLES