ಬೆಂಗಳೂರು : ಕರ್ನಾಟಕ ಸಿಎಂ ಆಯ್ಕೆ ಕಗ್ಗಂಟು ಮತ್ತೆ ಮುಂದುವರಿದಿದೆ. ಸಿಎಂ ಆಯ್ಕೆ ಸಂಬಂಧ ಎಲ್ಲಾ ನಿರ್ಧಾರಗಳನ್ನು ಎಐಸಿಸಿ ಪೆಂಡಿಂಗ್ ಇಟ್ಟಿದೆ. ಇತ್ತ, ಸಿಎಂ ಕುರ್ಚಿಗೆ ಪಟ್ಟು ಹಿಡಿದಿರುವ ಡಿಕೆಶಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೇ ಆಫರ್ ನೀಡಿದ್ದಾರೆ.
ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಇಂದು ಮಾತುಕತೆ ನಡೆಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕಮಾರ್ ಅವರು, ನಾನು ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ, ಅಧಿಕಾರಕ್ಕೆ ತಂದಿದ್ದೇನೆ ಎಂದು ವಾದ ಮಂಡಿಸಿದ್ದಾರೆ.
ನನಗೆ ಸಿಎಂ ಆಗಲು ಅವಕಾಶ ನೀಡದಿದ್ದರೆ ನೀವೇ ಸಿಎಂ ಆಗಿ ಎಂದು ಮಲ್ಲಿಕಾರ್ಜುನ ಖರ್ಗೆಗೆ ಆಗ್ರಹ ಮಾಡಿದ್ದಾರೆ. 2018ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಎದುರಿಸಿ, ಸೋತಿದ್ದೆವು. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಪಕ್ಷ ಅಧಿಕಾರಕ್ಕೆ ತಂದಿದ್ದೇನೆ ಎಂದು ಡಿಕೆಶಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಭಾಗ್ಯಗಳ ಸರದಾರನಿಗೆ ಸಿಎಂ ಪಟ್ಟ..?
ಸಿದ್ದು–ಡಿಶಿಗೆ ಸಮ್ಮುಖದಲ್ಲಿ ಮತ್ತೆ ಸಭೆ
ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿರುವ ಕಾರಣ ಇಂದು ಸಂಜೆ ಕಾಂಗ್ರೆಸ್ ಹೈಕಮಾಂಡ್ ಮತ್ತೊಂದು ಸುತ್ತಿನ ಮಾತುಕತೆಗೆ ಮುಹೂರ್ತ ಫಿಕ್ಸ್ ಮಾಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ನೇತೃತ್ವದಲ್ಲಿ ಸಭೆ ನಡೆಯುವ ಸಾಧ್ಯತೆಯಿದೆ.