ಬೆಂಗಳೂರು : ಕರ್ನಾಟಕ ಸಿಎಂ ಹುದ್ದೆ ಕಾಳಗ ಇಂದೂ ಸಹ ಫೈನಲ್ ಆಗಿಲ್ಲ. ಇದು ಕಾಂಗ್ರೆಸ್ ವರಿಷ್ಠರನ್ನು ಸಂಕಷ್ಟಕ್ಕೆ ದೂಡಿದೆ. ಈ ಮಧ್ಯೆ ಸಿದ್ದು ವಿರುದ್ಧ ಡಿಕೆಶಿ ಹೊಸ ಟ್ರಂಪ್ ಕಾರ್ಡ್ ಪ್ರಯೋಗಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ದೆಹಲಿಯಲ್ಲಿ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ಖರ್ಗೆ ಜೊತೆಗಿನ ಮಾತುಕತೆ ವೇಳೆ ತನಗೆ ಯಾಕೆ ಸಿಎಂ ಹುದ್ದೆ ನೀಡಬೇಕು ಎಂಬ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವನ್ನೇ ಡಿಕೆಶಿ ಈ ವೇಳೆ ಟ್ರಂಪ್ ಕಾರ್ಡ್ ಆಗಿ ಬಳಸಿದ್ದಾರೆ. ಮೈತ್ರಿ ಸರ್ಕಾರ ರಚನೆಗೆ ಹೋರಾಟ ಮಾಡಿದ್ದು ನಾನು. ಆದರೆ, 2021ರಲ್ಲಿ ಮೈತ್ರಿ ಸರ್ಕಾರ ಪತನವಾಗಿದ್ದು ಯಾರಿಂದ? ಎಂಬುವುದನ್ನು ಡಿಕೆಶಿ ಖರ್ಗೆ ಅವರಿಗೆ ಮನವರಿಕೆ ಮಾಡಿದ್ದಾರೆ.
ಇದನ್ನೂ ಓದಿ : ‘ಸೋಲು ಏಕೆ ಆಯ್ತು, ಏನು ಆಯ್ತು’ ಅಂತಾ ಪರಾಮರ್ಶೆ ಮಾಡಿದ್ದೇವೆ : ಬೊಮ್ಮಾಯಿ
ಅಲ್ಲದೆ, ಖರ್ಗೆಗೆ ಸಂಪೂರ್ಣ ರಾಜಕೀಯ ಕಾರಣ ನೀಡಿದ್ದಾರೆ. ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಬಂದಾಗಿನಿಂದ ಈವರೆಗಿನ ರಾಜಕೀಯ ಬೆಳವಣಿಗೆ ವಿವರಿಸಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ವಿರುದ್ಧ ಸಮ್ಮಿಶ್ರ ಸರ್ಕಾರ ಪತನವನ್ನೇ ಟ್ರಂಪ್ ಕಾರ್ಡ್ ಮಾಡಿದ್ದಾರೆ.
ಇನ್ನೂ, ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆಲುವಿಗೆ ನಾನು ಕಾರಣ. ವಿಧಾನಸಭೆ, ಲೋಕಸಭಾ ಚುನಾವಣೆಯಲ್ಲಿ ಸೋಲಿನ ಬಳಿಕ ಪಕ್ಷವನ್ನು ಕಟ್ಟಿದ್ದೇನೆ. ದಲಿತರೆಲ್ಲರೂ ಸಿದ್ದರಾಮಯ್ಯ ಹಿಂದೆ ಇರೋದಾ? ಈ ಬಗ್ಗೆ ನಿಮಗೆ ತಿಳಿದಿಲ್ವಾ? ಈ ಬಾರಿ ಒಕ್ಕಲಿಗ ಹಾಗೂ ಲಿಂಗಾಯತ ಮತಗಳು ನಮ್ಮ ಕೈ ಹಿಡಿದಿವೆ. ಹೀಗಾಗಿ, ನನಗೆ ಸಿಎಂ ಹುದ್ದೆ ನೀಡಲೇಬೇಕು ಎಂದು ಡಿಕೆಶಿ ಪಟ್ಟುಹಿಡಿದಿದ್ದಾರೆ ಎಂದು ತಿಳಿದುಬಂದಿದೆ.