ಬೆಂಗಳೂರು : ಶಿಕಾರಿಪುರ ಬಿಜೆಪಿ ಶಾಸಕ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಇಂದು ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮಿಗಳ ಗದ್ದುಗೆ ದರ್ಶನ ಪಡೆದರು.
ತುಮಕೂರಿನ ಸಿದ್ದಗಂಗಾ ಮಠಕ್ಕೆ ಕುಟುಂಬ ಸಮೇತವಾಗಿ ಭೇಟಿ ನೀಡಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ನಂತರ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ, ಮಠದ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರರ ಆಶೀರ್ವಾದ ಪಡೆದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತಂದೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಯಾವುದೇ ಶುಭ ಕಾರ್ಯಗಳಿಗೆ ಮುನ್ನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯುವುದು ವಾಡಿಕೆ. ಹಾಗಾಗಿ ನಾನು ವಿಧಾನಸಭೆಗೆ ಪ್ರವೇಶಿಸುವ ಮುನ್ನ ಶ್ರೀಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದೇನೆ ಎಂದರು.
ಇದನ್ನೂ ಓದಿ : REWIND : 8 ವರ್ಷದ ಹಿಂದೆ ‘ಶಿವಕುಮಾರ ಶ್ರೀಗಳಿಗೆ ಒಲಿದಿತ್ತು ಪದ್ಮಭೂಷಣ’
ಪಕ್ಷವನ್ನು ಸಂಘಟನೆ ಮಾಡಬೇಕು
ಬಿಜೆಪಿ ಸೋಲಿಗೆ ಹಲವು ಕಾರಣಗಳಿವೆ. ಅವುಗಳ ಬಗ್ಗೆ ಪಕ್ಷದ ನಾಯಕರು ಈಗಾಗಲೇ ಚರ್ಚೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯಾವ ರೀತಿ ಪಕ್ಷವನ್ನು ಸಂಘಟನೆ ಮಾಡಬೇಕು ಎಂಬ ಕುರಿತು ಚರ್ಚೆ ನಡೆಸಲಾಗುವುದು ಎಂದು ವಿಜಯೇಂದ್ರ ಹೇಳಿದರು.
ಲಿಂಗಾಯತ ಸಮುದಾಯ ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಪಕ್ಷಾಂತರವಾಯಿತು ಎಂಬುವುದನ್ನು ಒಪ್ಪಲು ಸಾಧ್ಯವಿಲ್ಲ. ಚುನಾವಣಾ ಫಲಿತಾಂಶದ ಮೇಲೆ ಇದು ಯಾವುದೇ ಪರಿಣಾಮ ಬೀರಿಲ್ಲ ಎಂದು ವಿಜಯೇಂದ್ರ ಸ್ಪಷ್ಟನೆ ನೀಡಿದರು.
ಈ ಸಂದರ್ಭದಲ್ಲಿ ಪತ್ನಿ ಪ್ರೇಮ ವಿಜಯೇಂದ್ರ, ಪುತ್ರಿಯರಾದ ಮೈತ್ರಿ, ಜಾನ್ಸಿ, ತುಮಕೂರು ನಗರ ಶಾಸಕ ಜಿ.ಬಿ ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಹೆಬ್ಬಾಕ ಹಾಗೂ ಮುಖಂಡರು ಉಪಸ್ಥಿತರಿದ್ದರು.