ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ಖ್ಯಾತ ನಟ ಕಿಚ್ಚ ಸುದೀಪ್ ಬಿಜೆಪಿ ಪಕ್ಷದ ಪರ ಪ್ರಚಾರ ಮಾಡಿದ್ದರು. ಆದರೆ, ಪ್ರಚಾರ ನಡೆಸಿದ್ದ ಪೈಕಿ ಬಹುತೇಕ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ.
ನಟ ಸುದೀಪ್ ಅವರೇ ಅಭ್ಯರ್ಥಿಗಳ ಸೋಲಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟನೆ ನೀಡಿದ್ದಾರೆ. ನಟ ಸುದೀಪ್ ರಾಜಕಾರಣಿ ಅಲ್ಲ. ಬಿಜೆಪಿ ಸೋಲಿಗೆ ಅವರನ್ನು ಹೊಣೆ ಅನ್ನುವುದು ಸರಿಯಲ್ಲ. ನಾನು ಈಗಾಗಲೇ ಹೇಳಿದ್ದೇನೆ. ಈ ಸೋಲಿಗೆ ನಾನೇ ಹೊಣೆ ಹೊರುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಜನರ ಕಲ್ಯಾಣ ಆಗಲಿ
ರಾಜ್ಯದ ಆರ್ಥಿಕ ಸ್ಥಿತಿ ಹಾಳು ಮಾಡದೇ ಜನರ ಕಲ್ಯಾಣ ಆಗಲಿ. ಪಕ್ಷಕ್ಕೆ ಆದ ಹಿನ್ನೆಡೆಯ ಜವಾಬ್ದಾರಿ ನಾನೇ ಹೊರುತ್ತೇನೆ. ವಿರೋಧ ಪಕ್ಷದಲ್ಲಿದ್ದು ಸಮರ್ಪಕವಾಗಿ ಕೆಲಸ ಮಾಡುತ್ತೇವೆ ಎಂದು ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ತಪ್ಪು ಸರಿಪಡಿಸಿಕೊಳ್ಳುತ್ತೇವೆ
ನಾವು ಹಿಂದೆ ಎಷ್ಟೋ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳನ್ನು ನೋಡಿದ್ದೇವೆ. ಸೋಲಿಗೆ ಹಲವಾರು ರೀತಿಯ ಕಾರಣಗಳು ಇವೆ. ಅವುಗಳನ್ನು ಎಲ್ಲವನ್ನೂ ಕುಳಿತು ಚರ್ಚೆ ಮಾಡುತ್ತೇವೆ. ಏನು ವ್ಯತ್ಯಾಸ ಆಗಿದೆ, ಎಲ್ಲಿ ಏನಾಗಿದೆ ಎಂದು ಚರ್ಚಿಸಿ, ಆಗಿದ್ದ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ನಟ ಯಶ್ ಮತದಾನ : ಪ್ರಚಾರಕ್ಕೆ ಹೋಗದ ಬಗ್ಗೆ ಹೇಳಿದ್ದೇನು?
ನಮ್ಮದು ಒಂದು ರಾಷ್ಟ್ರೀಯ ಪಕ್ಷ. ನಾವು ಕೇವಲ ಚುನಾವಣಗೆ ಮಾತ್ರ ಕೆಲಸ ಮಾಡಲ್ಲ. ರಾಷ್ಟ್ರದ ನಿರ್ಮಾಣಕ್ಕೆ ಕೆಲಸ ಮಾಡುತ್ತೇವೆ. ಇನ್ನೇನು ಕೇವಲ 8 ರಿಂದ 10 ತಿಂಗಳಲ್ಲಿ ಲೋಕಸಭೆ ಚುನಾವಣೆ ಬರುತ್ತಿದೆ. ಆ ಚುನಾವಣೆಗೆ ಪಕ್ಷ ಗಟ್ಟಿಗೊಳಿಸುವ ಕೆಲಸ ಮಾಡುತ್ತೇವೆ. ಈ ಚುನಾವಣೆ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿ ಅಲ್ಲ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಏನೇ ಆಗಲಿ ಸೋಲು ಸೋಲು
ರಾಜ್ಯಪಾಲರ ಭೇಟಿ ಮಾಡಿ ರಾಜೀನಾಮೆ ನೀಡಿದ್ದೇನೆ. ಜನರ ತೀರ್ಪನ್ನು ಗೌರವಯುತವಾಗಿ ಒಪ್ಪಿಕೊಂಡಿದ್ದೇವೆ. ಪಕ್ಷಕ್ಕೆ ಆದ ಹಿನ್ನೆಡೆಯ ಜವಬ್ದಾರಿ ನಾನೇ ಹೊರುತ್ತೇನೆ. ಕಳೆದ ಬಾರಿ ನನಗೆ 104 ಸೀಟು ಬಂದಿತ್ತು. ಈ ಬಾರಿ ಪರ್ಸೆಂಟೇಜ್ ಜಾಸ್ತಿ ಬಂದರು, ಕಡಿಮೆ ಸೀಟು ಬಂದಿವೆ. ಏನೇ ಆಗಲಿ ಸೋಲು ಸೋಲು. ನಾವು ಇದರ ಬಗ್ಗೆ ಆತ್ಮವಲೋಕನ ಮಾಡಿ, ಎಲ್ಲಿ ತಪ್ಪು ಆಗಿದೆ ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.