ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಹೊರಬಿದ್ದಿದ್ದು ಬಿಜೆಪಿ ಸರ್ಕಾರದ ಹಲವು ಪ್ರಭಾವಿ ಸಚಿವರು ಪರಾಭವಗೊಂಡಿದ್ದಾರೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ವಸತಿ ಸಚಿವ ವಿ.ಸೋಮಣ್ಣ ಅವರು ಎರಡೂ ಕ್ಷೇತ್ರಗಳಲ್ಲಿ ಸೋಲು ಕಂಡಿದ್ದಾರೆ.
ತುಮಕೂರು ಜಿಲ್ಲೆಯ ಇಬ್ಬರು ಸಚಿವರು ಸೋಲು ಕಂಡಿದ್ದಾರೆ. ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿ ಸಣ್ಣ ನೀರಾವರಿ ಸಚಿವರಾಗಿದ್ದ ಜೆ.ಸಿ ಮಾಧುಸ್ವಾಮಿ ಹಾಗೂ ತಿಪಟೂರು ಕ್ಷೇತ್ರದಿಂದ ಗೆದ್ದು ಶಿಕ್ಷಣ ಸಚಿವರಾಗಿದ್ದ ಬಿ.ಸಿ ನಾಗೇಶ್ ಅವರಿಗೆ ಭಾರೀ ಮುಖಭಂಗವಾಗಿದೆ. ಮತದಾರರು ಇಬ್ಬರೂ ಸಚಿವರನ್ನು ಮನೆ ಕಳಿಸಿದ್ದಾರೆ.
ಇದನ್ನೂ ಓದಿ : ಯಾವ ಕ್ಷೇತ್ರದಲ್ಲಿ ಯಾವ ಪಕ್ಷ ಮುನ್ನಡೆ? ಇಲ್ಲಿದೆ ಸಂಪೂರ್ಣ ಮಾಹಿತಿ
‘ಕೈ‘ ತೊರೆದು ಬಿಜೆಪಿ ಸೇರಿದ್ದ ಶಾಸಕರು
ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಆಯ್ಕೆಯಾಗಿ ಆರೋಗ್ಯ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಸೋಲು ಕಂಡಿದ್ದಾರೆ. ಅಷ್ಟೇ ಅಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಶಾಸಕರ ಪೈಕಿ ಎಂ.ಟಿ.ಬಿ ನಾಗರಾಜ್, ಬಿ.ಸಿ ಪಾಟೀಲ್ ಅವರಿಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ಹೊಂದಿದ್ದ ಗೋವಿಂದ ಕಾರಜೋಳ, ಬಿ. ಶ್ರೀರಾಮುಲು ಸೋತಿದ್ದಾರೆ. ಇನ್ನೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಸ್ಪರ್ಧಿಸಿದ್ದ ಆರ್.ಅಶೋಕ್ ಕನಕಪುರದಲ್ಲಿ ಸೋತಿದ್ದಾರೆ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಕೂಡ ಸೋತಿದ್ದಾರೆ.
ಇವರೇ ಸೋತ ಸಚಿವರು
- ವಿ.ಸೋಮಣ್ಣ-ಚಾಮರಾಜನಗರ, ವರುಣಾ
- ಆರ್.ಅಶೋಕ್-ಕನಕಪುರ
- ಮುರುಗೇಶ್ ನಿರಾಣಿ-ಬೀಳಗಿ
- ಗೋವಿಂದ ಕಾರಜೋಳ-ಮುಧೋಳ
- ಡಾ.ಕೆ ಸುಧಾಕರ್-ಚಿಕ್ಕಬಳ್ಳಾಪುರ
- ಜೆ.ಸಿ ಮಾಧುಸ್ವಾಮಿ-ಚಿಕ್ಕನಾಯಕನಹಳ್ಳಿ
- ಬಿ.ಸಿ ನಾಗೇಶ್-ತಿಪಟೂರು
- ಬಿ.ಸಿ ಪಾಟೀಲ್-ಹಿರೇಕೆರೂರು
- ಬಿ.ಶ್ರೀರಾಮುಲು-ಬಳ್ಳಾರಿ ಗ್ರಾಮಾಂತರ
- ಎಂ.ಟಿ.ಬಿ ನಾಗರಾಜ್-ಹೊಸಕೋಟೆ
- ಕೆ.ಸಿ ನಾರಾಯಣಗೌಡ-ಕೆ.ಆರ್ ಪೇಟೆ
- ಹಾಲಪ್ಪ ಆಚಾರ್-ಯಲಬುರ್ಗಾ
- ಶಂಕರ್ ಪಾಟೀಲ್ ಮುನೇನಕೊಪ್ಪ-ನವಲಗುಂದ
- ಸಿದ್ದಾರ್ಥ ಸಿಂಗ್(ಆನಂದ್ ಸಿಂಗ್ ಮಗ) – ಹೊಸಪೇಟೆ