ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬೀಳುವ ಮೊದಲೇ ಜೆಡಿಎಸ್ ಅಭ್ಯರ್ಥಿಗೆ ನೀವೇ ಮುಂದಿನ ಶಾಸಕರು ಎಂದು ನಾಮಫಲಕ ನೀಡಲಾಗಿದೆ.
ಹೌದು, ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಅವರಿಗೆ ಚುನಾವಣೆಯ ಫಲಿತಾಂಶ ಬರುವ ಮೊದಲೇ ಶಾಸಕರು ಎಂಬ ನಾಮಫಲಕವನ್ನು ಅವರ ಬೆಂಬಲಿಗರು ನೀಡಿದ್ದಾರೆ.
ನಾಳೆ (ಮೇ 13ರಂದು) ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಮಧ್ಯಾಹ್ನದ ವೇಳೆಗೆ ಫಲಿತಾಂಶ ಬರಲಿದೆ. ಇದಕ್ಕೂ ಮೊದಲೇ ಗೋವಿಂದರಾಜು, ಶಾಸಕರು, ತುಮಕೂರು ನಗರ ಕ್ಷೇತ್ರ ಎಂಬ ನಾಮಫಲಕವನ್ನು ಗೋವಿಂದರಾಜು ಅವರಿಗೆ ನೀಡಲಾಗಿದೆ. ಜೆಡಿಎಸ್ ಬೆಂಬಲಿಗರು ಅತೀವ ವಿಶ್ವಾಸದಲ್ಲಿರುವುದು ಕುತೂಹಲ ಕೆರಳಿಸಿದೆ.
ಎನ್.ಗೋವಿಂದರಾಜು ಅಭಿಮಾನಿಗಳು ನೀಡಿದ ನೇಮ್ ಪ್ಲೇಟ್ ಅನ್ನು ಗೋವಿಂದರಾಜು ಯಾವುದೇ ಮುಜುಗರ ಮಾಡದೆ ನಾಮಫಲಕವನ್ನು ಸ್ವೀಕರಿಸಿದ್ದಾರೆ. ಇದು ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲೆಸಿದರು ಎನ್ನುವಂತೆ ಆಗಿದೆ.
ಇದನ್ನೂ ಓದಿ : ಕುಮಾರಸ್ವಾಮಿ ಹೇಳೋದ್ರಲ್ಲಿ ತಪ್ಪೇನಿಲ್ಲ : ‘ಮೈತ್ರಿ ಸುಳಿವು’ ಕೊಟ್ಟ ಯಡಿಯೂರಪ್ಪ
ಯಾವುದೇ ಆಮಿಷಕ್ಕೆ ಒಳಗಾಗಬೇಡಿ
ರಾಜ್ಯದಲ್ಲಿ ಅತಂತ್ರ ಚುನಾವಣಾ ಫಲಿತಾಂಶ ಸಾಧ್ಯತೆಯಿದೆ. ಈ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.
ಜೆಡಿಎಸ್ ಅಭ್ಯರ್ಥಿಗಳು ರಾಷ್ಟ್ರೀಯ ಪಕ್ಷಗಳು ನೀಡುವ ಯಾವುದೇ ಆಮಿಷಕ್ಕೆ ಒಳಗಾಗಬಾರದು. ಸರ್ಕಾರ ರಚನೆಯಲ್ಲಿ ನಾವು ಪ್ರಮುಖ ಪಾತ್ರ ವಹಿಸುತ್ತೇವೆ. ಯಾವುದಕ್ಕೂ ಯಾರು ವಿಚಲಿತರಾಗಬೇಡಿ ಎಂದು ಸೂಚನೆ ನೀಡಿದ್ದಾರೆ.