ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಸಂಬಂಧ ಮತಗಟ್ಟೆ (ಚುನಾವಣೋತ್ತರ) ಸಮೀಕ್ಷೆಗಳು ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಸೂಚಿಸಿರುವ ಹಿನ್ನೆಲೆ ಮುಖ್ಯಮಂತ್ರಿ ಪಟ್ಟಕ್ಕೆ ಭಾರೀ ಫೈಟ್ ಏರ್ಪಟ್ಟಿದೆ.
ಕಾಂಗ್ರೆಸ್ ಪಕ್ಷದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಿಎಂ ಗಾದಿಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಈ ನಡುವೆ ಟ್ವಿಟ್ಟರ್ ನಲ್ಲಿ #DKforCM ಟ್ರೆಂಡಿಂಗ್ ನಲ್ಲಿದೆ. ಇನ್ನು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಅಥವಾ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬಹುದು. ಇಲ್ಲವೇ ಒಪ್ಪಂದದ ಮೂಲಕ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ತಲಾ ಎರಡೂವರೆ (2.5 ವರ್ಷ) ವರ್ಷ ಸಿಎಂ ಪಟ್ಟ ಹಂಚಿಕೊಳ್ಳಬಹುದು.
ಇದನ್ನೂ ಓದಿ : ಡೋಂಟ್ ವರಿ.. ಅತಂತ್ರ ಬಂದ್ರೆ ಕುಮಾರಸ್ವಾಮಿ ಇದಾರಲ್ಲ : ಸತೀಶ್ ಜಾರಕಿಹೊಳಿ
ಪರಂಗೆ ಖರ್ಗೆ ಕೃಪಾಕಟಾಕ್ಷ?
ಇನ್ನೂ ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತ ನಾಯಕರು ಸಹ ಸಿಎಂ ಗಾದಿಯ ರೇಸ್ ನಲ್ಲಿದ್ದಾರೆ. ದಲಿತ ಸಮುದಾಯದ ವಿಷಯಕ್ಕೆ ಬಂದರೆ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ ಅವರು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಒಂದು ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕೃಪಾಕಟಾಕ್ಷ ಪರಂ ಮೇಲೆ ಬಿದ್ದರೆ ಸಿದ್ದು ಹಾಗೂ ಡಿಕೆಶಿಗೆ ಸಿಎಂ ಪಟ್ಟ ಕೈ ತಪ್ಪುವುದು ಪಕ್ಕಾ ಎನ್ನಲಾಗುತ್ತಿದೆ. ನಾಳೆಯ ಫಲಿತಾಂಶ ಬಳಿಕ ಇದಕ್ಕೆ ತೆರೆ ಬೀಳಲಿದೆ.
ಕೂಸು ಹುಟ್ಟುವ ಮುನ್ನ ಕುಲಾಯಿ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಸಿಎಂ ಯಾರಾಗುತ್ತಾರೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಆಯ್ಕೆ ಬಗ್ಗೆ ಈಗಲೇ ಏನೂ ಹೇಳುವುದಿಲ್ಲ. ಕೂಸು ಹುಟ್ಟುವ ಮುನ್ನ ಕುಲಾಯಿ ಹೊಲಿಸಿದಂತೆ ಆಗುತ್ತದೆ ಎಂದು ಜಾಣ್ಮೆಯ ಉತ್ತರ ನೀಡಿದ್ದಾರೆ.