ಬೆಂಗಳೂರು : ಕಂದಾಯ ಸಚಿವ ಆರ್. ಅಶೋಕ್ ಪ್ರತಿನಿಧಿಸುತ್ತಿರುವ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ವ್ಯಪ್ತಿಯ ಮತಗಟ್ಟೆಯಲ್ಲೇ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ.
ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಪಾಪಯ್ಯ ಗಾರ್ಡನ್ 28, 29 ಬೂತ್ ಬಳಿ ಘಟನೆ ನಡೆದಿದೆ. ಓಟಿಂಗ್ ಬೂತ್ ಎದುರಲ್ಲಿ ಮಾರಾಮಾರಿ ನಡೆದಿದ್ದು, ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೊಣ್ಣೆಗಳಿಂದ ಹಲ್ಲೆ ಮಾಡಲಾಗಿದೆ.
ಗಾಂಜಾ ಮತ್ತಿನಲ್ಲಿ ಬಂದಿದ್ದ ಸುಮಾರು 30ಕ್ಕೂ ಹೆಚ್ಚು ಪುಂಡರ ಗುಂಪು ಏಕಾಏಕಿ ಕಾರ್ಯಕರ್ತರ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಮಹಿಳೆಯರ ಮೇಲೆಯೂ ಪುಂಡರ ಗ್ಯಾಂಗ್ ಹಲ್ಲೆ ಮಾಡಿದೆ ಎಂದು ತಿಳಿದುಬಂದಿದೆ.
ಕಬ್ಬಾಳ್ ಉಮೇಶ್ ಹುಡುಗರನ್ನು ಕರೆಸಿ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಕಬ್ಬಳ್ ಉಮೇಶ್ ಮಾಜಿ ಕಾರ್ಪೋರೇಟರ್ ಲಕ್ಷ್ಮೀ ಅವರ ಪತಿ. ಮೀನಮ್ಮ ಮತ್ತು ಚನ್ನಪ್ಪ ಎಂಬುವವರಿಂದ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಸಂಬಂಧ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ. ಹಲ್ಲೆ ವಿಡಿಯೋ ಫೋಟೇಜ್ ಪಡೆದು ತನಿಖೆ ಕೈಗೊಂಡಿದ್ದಾರೆ.
ಕೈ ಕೊಟ್ಟ ಮತ ಯಂತ್ರ
ಮಹದೇವಪುರ ಕ್ಷೇತ್ರದ ಜ್ಯೋತಿ ಪುರ ಗ್ರಾಮದ ಮತಗಟ್ಟೆ ಸಂಖ್ಯೆ 3ರಲ್ಲಿ ತಾಂತ್ರಿಕ ತೊಂದರೆ ಉಂಟಾಗಿದೆ. ಅರ್ಧಗಂಟೆಗೂ ಹೆಚ್ಚು ಕಾಲ ಮತದಾರರು ಪರದಾಟ ನಡೆಸಿದ್ದಾರೆ. 150ಕ್ಕೂ ಹೆಚ್ಚು ಮತದಾರರು ಸರತಿ ಸಾಲಿನಲ್ಲಿ ನಿಂತಿದ್ದರು. ಚುನಾವಣಾ ಅಧಿಕಾರಗಳ ನಿರ್ಲಕ್ಷ್ಯದಿಂದ ಮತದಾರರು ಬಿಸಿಲಿನಲ್ಲಿ ಕಾಯುವ ಪರಿಸ್ಥಿರಿ ಉಂಟಾಗಿದೆ.