ದಾವಣಗೆರೆ : ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಚೆಕ್ ಪೋಸ್ಟ್ ವ್ಯವಸ್ಥೆ ಮಾಡಲಾಗಿದೆ. ಇಂದು 18380 ಮೌಲ್ಯದ 39.47 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲೆಯಾದ್ಯಂತ ವಿವಿಧ ಚೆಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿದೆ. ಮೇ 6 ರಂದು ಪೊಲೀಸ್ ಇಲಾಖೆ 13.59 ಲೀಟರ್ ಹಾಗೂ ಅಬಕಾರಿ ಇಲಾಖೆಯಿಂದ ಕಾರ್ಯಾಚರಣೆ ಮಾಡಿ 25.88 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಈವರೆಗೆ 94,74,057 ನಗದು, 3,1747720.99 ಮೌಲ್ಯದ 47348.355 ಲೀ ಮದ್ಯ, 71610 ಮೌಲ್ಯದ 3.853 ಕೆ.ಜಿ ಮಾದಕ ವಸ್ತು, 8498048 ಮೌಲ್ಯದ ಕುಕ್ಕರ್ ಸೇರಿದಂತೆ ಇತರೆ ವಸ್ತುಗಳು ಒಟ್ಟು 4.97 ಕೋಟಿಯಷ್ಟು ನಗದು ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಇದನ್ನೂ ಓದಿ : ‘ಭ್ರಷ್ಟಾಚಾರ ಮುಕ್ತ ರಾಜ್ಯ’ಕ್ಕಾಗಿ ಉಮಾಪತಿಯವರನ್ನು ಗೆಲ್ಲಿಸಿ : ಪ್ರಿಯಾಂಕಾ ಗಾಂಧಿ
ಐದು ದಿನ ಮದ್ಯ ಮಾರಾಟ ನಿಷೇಧ
ವಿಧಾನಸಭಾ ಚುನಾವಣೆ ಮತದಾನವು ಮೇ 10 ರಂದು ನಡೆಯಲಿದ್ದು ಈ ವೇಳೆ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮೇ 8 ರಂದು ಸಂಜೆ 6 ಗಂಟೆಯಿಂದ ಮೇ 11ರ ಬೆಳಿಗ್ಗೆ 6 ಗಂಟೆಯವರೆಗೆ ಹಾಗೂ ಮತ ಏಣಿಕೆ ನಡೆಯುವ ಮೇ 13 ರಂದು ಬೆಳಿಗ್ಗೆ 6 ಗಂಟೆಯಿಂದ ಮೇ 14 ರ ಬೆಳಿಗ್ಗೆ 6 ಗಂಟೆಯವರೆಗೂ ಜಿಲ್ಲೆಯಾದ್ಯಂತ ಎಲ್ಲಾ ಬಗೆಯ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ಶಿವಾನಂದ ಕಾಪಶಿ ಆದೇಶಿಸಿದ್ದಾರೆ.
ನಿಷೇಧಿತ ಅವಧಿಯಲ್ಲಿ ಮದ್ಯದಂಗಡಿ ಮುಚ್ಚುವಂತೆ ಆದೇಶಿಸಿ ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್, ಕ್ಲಬ್, ಡಾಬಾ, ಛತ್ರ ಹಾಗೂ ಇನ್ನಿತರ ಯಾವುದೇ ಸಾರ್ವಜನಿಕ ಮತ್ತು ಯಾವುದೇ ಖಾಸಗಿ ಸ್ಥಳಗಳಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.